ಅವಿನಾಶ್ ಜೈನಹಳ್ಳಿ ಮೈಸೂರು
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎಂದಿನಂತೆ ಆಯೋಜಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಲು ಮುಂದಾಗಿರುವ ಸರ್ಕಾರ, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲು ತೀರ್ಮಾನಿಸಿದೆ.
ಮೈಸೂರು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳ ಕಲಾವಿದರಿಗೆ ಅರ್ಧದಷ್ಟು ಅವಕಾಶ ಸಿಗಲಿದೆ. ಈ ಪೈಕಿ ಸ್ಥಳೀಯ ಕಲಾವಿದರಿಗೆ ಶೇ. 25ರಷ್ಟು ಹಾಗೂ ಹೊರ ಜಿಲ್ಲೆಯ ಕಲಾವಿದರಿಗೆ ಶೇ.25 ರಷ್ಟು ಅವಕಾಶ ನೀಡಲು ಸಾಂಸ್ಕೃತಿಕ ದಸರಾ ಉಪ ಸಮಿತಿ ಮುಂದಾಗಿದೆ. ಜತೆಗೆ, ರಾಷ್ಟ್ರ ಮಟ್ಟದ ಕಲಾವಿದರಿಗೆ ಶೇ.30 ರಷ್ಟು ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಿಗೆ ಶೇ. 20 ರಷ್ಟು ಅವಕಾಶ ನೀಡಲು ನಿರ್ಧರಿಸಿದೆ.
ಅರಮನೆ ಮುಖ್ಯ ವೇದಿಕೆ ಸೇರಿದಂತೆ ಕಲಾಮಂದಿರ, ಗಾನಭಾರತಿ, ಚಿಕ್ಕಗಡಿಯಾರ, ಪುರಭವನ, ಜಗನ್ಮೋಹನ ಅರಮನೆ, ನಾದಬ್ರಹ್ಮ, ಕಿರುರಂಗಮಂದಿರ ವೇದಿಕೆಗಳಲ್ಲಿ ದಸರಾ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಸೆ. 26 ರಿಂದ 9 ದಿನ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾರಸಿಕರನ್ನು ರಂಜಿಸಲಿವೆ. ಎಲ್ಲ ವೇದಿಕೆಗಳಲ್ಲಿ ನಿತ್ಯ ಸಂಜೆ 5.30 ರಿಂದ ರಾತ್ರಿ 10 ಗಂಟೆವರೆಗೆ ಕಾರ್ಯಕ್ರಮ ನಡೆಯಲಿವೆ. 5.30 ರಿಂದ 6 ಗಂಟೆವರೆಗೆ ಒಂದು ಕಾರ್ಯಕ್ರಮ, 6 ರಿಂದ 7, 7 ರಿಂದ 8.30 ಹಾಗೂ 8.30 ರಿಂದ 10 ಗಂಟೆ ನಡುವೆ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿವೆ. 7 ರಿಂದ 8.30 ಹಾಗೂ 8.30 ರಿಂದ 10 ಗಂಟೆಯ ಸಮಯದಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡುವ ಸಾಧ್ಯತೆ ಇದೆ.
ಪ್ರತಿ ವೇದಿಕೆಯಲ್ಲಿ ನಿತ್ಯ 4 ಕಾರ್ಯಕ್ರಮಗಳಂತೆ ಒಟ್ಟು 300ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲು ಚಿಂತಿಸಲಾಗಿದೆ. ಈ ಪೈಕಿ ಮೈಸೂರಿನ 75 ಕಲಾವಿದರು ಹಾಗೂ ಹೊರ ಜಿಲ್ಲೆಯ 75 ಕಲಾವಿದರಿಗೆ ಅವಕಾಶ ದೊರೆಯಲಿದೆ. ರಾಷ್ಟ್ರ ಮಟ್ಟದ 90 ಕಲಾವಿದರಿಗೆ ಅವಕಾಶ ದೊರೆಯಲಿದ್ದು, ಮೈಸೂರು ಹಾಗೂ ರಾಜ್ಯದಲ್ಲಿರುವ ರಾಷ್ಟ್ರ ಮಟ್ಟದ ಕಲಾವಿದರೂ ಈ ವಿಭಾಗದಲ್ಲಿ ಅವಕಾಶ ಪಡೆಯಬಹುದಾಗಿದೆ. ಇನ್ನು ಅಂತಾರಾಷ್ಟ್ರೀಯ ಮಟ್ಟದ 60 ಕಲಾವಿದರಿಗೆ ಅವಕಾಶ ಸಿಗಲಿದೆ.
ಹೊಸ ಕಲಾವಿದರಿಗೆ ಅವಕಾಶ:
ಮೂರು ವರ್ಷದಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸದೆ ಇರುವ ಅರ್ಹ ಹೊಸ ಕಲಾವಿದರಿಗೆ ಈ ಬಾರಿ ಅವಕಾಶ ನೀಡಲು ದಸರಾ ಸಾಂಸ್ಕೃತಿಕ ಉಪ ಸಮಿತಿ ತೀರ್ಮಾನಿಸಿದೆ. ನಾಡಹಬ್ಬ ದಸರಾ ಮಹೋತ್ಸವವೀಗ ಕೇವಲ ಸಾಂಪ್ರದಾಯಿಕ ಹಬ್ಬವಾಗಿಲ್ಲ. ಪ್ರತಿವರ್ಷ ದಸರಾ ಮಹೋತ್ಸವವನ್ನು ನೆಚ್ಚಿಕೊಂಡು ಅನೇಕ ವ್ಯಾಪಾರಿಗಳು ಬದುಕು ಕಟ್ಟಿಕೊಂಡಿದ್ದರೆ, ತಮ್ಮಲ್ಲಿನ ಕಲೆಯನ್ನು ಪ್ರದರ್ಶಿಸಲು ಕಲಾವಿದರು ಹಾತೊರೆಯುತ್ತಾರೆ. ಹೀಗಾಗಿ, ಕಲೆ ಮತ್ತು ಕಲಾವಿದರ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ವಿಶೇಷವಾಗಿ ಎಲ್ಲ ಜಿಲ್ಲೆಯ ಗ್ರಾಮೀಣ ಭಾಗದ ಕಲಾವಿದರಿಗೆ ಹಾಗೂ ಎಲ್ಲ ಕಲಾ ಪ್ರಕಾರಗಳಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ. ನಮ್ಮ ಜಾನಪದ ಕಲಾವಿದರನ್ನು ಗೌರವಿಸುವ ಜತೆಗೆ ಸಂಗೀತ, ನೃತ್ಯ, ನಾಟಕೋತ್ಸವಗಳನ್ನು ಪ್ರೋತ್ಸಾಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಎರಡು ವೇದಿಕೆಯಲ್ಲಿ ನಾಟಕ: ಪೌರಾಣಿಕ, ಸಾಮಾಜಿಕ ಸೇರಿದಂತೆ ನಾಟಕದ ಎಲ್ಲ ಪ್ರಕಾರಗಳಿಗೂ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಪುರಭವನ ಹಾಗೂ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಪುರಭವನದಲ್ಲಿ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ. ಕಿರು ರಂಗಮಂದಿರದಲ್ಲಿ ಎಲ್ಲ ಬಗೆಯ ನಾಟಕ ಪ್ರದರ್ಶನ ಆಯೋಜಿಸಲಾಗುತ್ತದೆ ಎಂದು ಸಾಂಸ್ಕೃತಿಕ ದಸರಾ ಉಪ ಸಮಿತಿ ಕಾರ್ಯಾಧ್ಯಕ್ಷೆ ನಿರ್ಮಲಾ ಮಠಪತಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯಲ್ಲಿ ಈ ಬಾರಿ ಸ್ಥಳೀಯ ಕಲಾವಿದರು ಸೇರಿದಂತೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಎಲ್ಲ ಕಲಾವಿದರಿಗೂ ಅವಕಾಶ ನೀಡಲಾಗುತ್ತದೆ. ಈ ಸಂಬಂಧ ಕಲಾವಿದರಿಂದ 900 ಅರ್ಜಿಗಳು ಬಂದಿವೆ. ಸ್ವಾತಂತ್ರೃದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಶೇಷವಾಗಿ ಉದ್ಘಾಟಿಸಲು ಯೋಜನೆ ರೂಪಿಸಲಾಗಿದೆ.ನಿರ್ಮಲಾ ಮಠಪತಿ, ಕಾರ್ಯಾಧ್ಯಕ್ಷರು, ಸಾಂಸ್ಕೃತಿಕ ದಸರಾ ಉಪ ಸಮಿತಿ