ಉಡುಪಿ: ಉಡುಪಿಯಲ್ಲಿ ಶಂಕಿತ ಕರೊನಾ ವೈರಸ್ ಪೀಡಿತ ರೋಗಿಗಳ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಯಲ್ಲಿ 5 ಹಾಸಿಗೆಗಳುಳ್ಳ ಪ್ರತ್ಯೇಕ ವಾರ್ಡ್‌ಗಳಲ್ಲಿ 3 ವೆಂಟಿಲೇಟರ್ ಸಹಿತ 2 ಐಸಿಯುಗಳ ವ್ಯವಸ್ಥೆ ಹಾಗೂ ತಾಲೂಕು ಆಸ್ಪತ್ರ ಕುಂದಾಪುರ ಮತ್ತು ಕಾರ್ಕಳದಲ್ಲಿ 3 ಬೆಡ್‌ನ ಐಸೋಲೇಷನ್ ವಾರ್ಡ್ ವ್ಯವಸ್ಥೆ ಮಾಡಲಾಗಿದೆ.
ಕರೊನಾ ವೈರಸ್‌ನಿಂದ ಹರಡುವ ರೋಗದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು, ಸಾರ್ವಜನಿಕರು ಗಾಬರಿಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೈರಸ್ ಹರಡುವುದನ್ನು ತಡೆಯುವ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ನಿರ್ದೇಶನ ಮೇರೆಗೆ ಜಿಲ್ಲೆಯಲ್ಲಿ ಈಗಾಗಲೇ ತುರ್ತು ಕಾರ್ಯಪಡೆ ರಚಿಸಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಆಸ್ಪತ್ರೆಗಳ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಪಂಚಾಯತ್ ಪಿಡಿಒಗಳಿಗೆ ತರಬೇತಿ ನೀಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಔಷಧ ಮತ್ತು ಮಾಸ್ಕ್‌ಗಳು ಸೇರಿದಂತೆ ಎಲ್ಲ ಸುರಕ್ಷಾ ಸಾಮಗ್ರಿಗಳ ದಾಸ್ತಾನು ಇದೆ ಎಂದರು.
ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳು ದಾಖಲಾದರೂ ಜಿಲ್ಲಾ ಸರ್ವೇಕ್ಷಣಾ ಘಟಕದ ಪ್ರಯೋಗ ಶಾಲೆಯಿಂದಲೇ ಶಂಕಿತ ರೋಗಿಗಳ ಗಂಟಲು ದ್ರವ ಮಾದರಿ ಸಂಗ್ರಹಿಸಿ ಬೆಂಗಳೂರಿಗೆ ಕಳುಹಿಸಲಾಗುತ್ತದೆ. ಹೊರದೇಶದಿಂದ ಬರುವ ವಿದ್ಯಾರ್ಥಿಗಳ ಕುರಿತು ಮಾಹೆ ವಿಶ್ವವಿದ್ಯಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮರಾವ್ ಸುದ್ದಿಗೋಷ್ಠಿಯಲ್ಲಿದ್ದರು.
ಉಡುಪಿಯಲ್ಲಿ ವ್ಯಕ್ತಿಗೆ ಜ್ವರ, ತೀವ್ರ ನಿಗಾ: ಮಂಗಳವಾರ ಇಸ್ರೇಲ್‌ನಿಂದ ಉಡುಪಿಗೆ ಬಂದ ಹೆಬ್ರಿ ಮುನಿಯಾಲು ಎಂಬಲ್ಲಿನ 70ರ ಹರೆಯದ ವ್ಯಕ್ತಿಗೆ ಜ್ವರ ಕಾಣಿಸಿಕೊಂಡಿದ್ದು, ತೀವ್ರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಮ್ಮು ಹಾಗೂ ಶೀತದ ತೊಂದರೆಯಿರುವ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ತಪಾಸಣೆಗಾಗಿ ಅವರನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಟಲಿನ ದ್ರವ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. 48 ಗಂಟೆಯಲ್ಲಿ ವರದಿ ಬರುವ ನಿರೀಕ್ಷೆ ಇದೆ. ಬಳಿಕ ರೋಗವನ್ನು ಖಚಿತಪಡಿಸಿಕೊಂಡು ಮುಂದಿನ ಚಿಕಿತ್ಸೆ ಕುರಿತು ನೀಡಲಾಗುವುದು. ಗುರುವಾರ ಈ ವ್ಯಕ್ತಿಯ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದರು.
ಸರ್ಕಾರಿ ಬಸ್ ನಿರ್ವಹಣೆ ವ್ಯವಸ್ಥೆಯೂ ಹೈ ಅಲರ್ಟ್
ಮಂಗಳೂರು: ಕರೊನಾ ಸೋಂಕು ಶಂಕೆ ಪ್ರಕರಣ ಕರ್ನಾಟಕದ ವಿವಿಧೆಡೆ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ ಕೂಡ ಹೈ ಅಲರ್ಟ್ ಆಗಿದೆ. ದಿನನಿತ್ಯ ಬಸ್ ತೊಳೆದ ಬಳಿಕ ಪ್ರಯಾಣಿಕರು ಬಳಸುವ ಬಸ್ ಆಸನ, ಸ್ಟೀಲ್ ರಾಡ್ ಮತ್ತಿತರ ಸಲಕರಣೆಗಳ ಮೇಲೆ ಆರೋಗ್ಯ ಇಲಾಖೆ ಶಿಫಾರಸು ಮಾಡಿದ ರಾಸಾಯನಿಕ ವಸ್ತುಗಳ ಸಿಂಪಡಣೆ, ವೈದ್ಯರಿಂದ ನಿಗಮದ ಸಿಬ್ಬಂದಿ, ಮುಖ್ಯವಾಗಿ ಬಸ್ ಚಾಲಕರು ಹಾಗೂ ನಿರ್ವಾಹಕರಿಗೆ ತರಬೇತಿ, ಸೂಚನಾ ಫಲಕಗಳ ಮೂಲಕ ಸೂಕ್ತ ನಿರ್ದೇಶನ, ಮಾಹಿತಿ ಒದಗಿಸಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಎಸ್.ಅರುಣ್ ತಿಳಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ಡಿಪೋ ಸಿಬ್ಬಂದಿಗೆ ಕೂಡ ಸೂಚನೆ, ತರಬೇತಿ ನೀಡಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.
ಬಿ.ಸಿ.ರೋಡಲ್ಲಿ ಔಷಧೀಯ ದ್ರಾವಣ ಸಿಂಪಡಣೆ: ಕರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಬಿ.ಸಿ.ರೋಡಿನ ಕೆಎಸ್‌ಆರ್‌ಟಿಸಿ ಘಟಕದಲ್ಲಿ ಔಷಧೀಯ ದ್ರಾವಣವನ್ನು ಸಿಂಪಡಿಸಲಾಯಿತು. ಕೇಂದ್ರ ಕಚೇರಿಯ ನಿರ್ದೇಶನದಂತೆ ಬಸ್‌ಗಳಲ್ಲಿ ಕರೊನಾ ವೈರಸ್ ಸೋಂಕಿನಿಂದ ಮುಕ್ತಗೊಳಿಸಲು ಅನುಕೂಲವಾಗುವ ರೀತಿಯಲ್ಲಿ ಔಷಧೀಯ ದ್ರಾವಣವನ್ನು ಬಿ.ಸಿ.ರೋಡು ಘಟಕದಲ್ಲಿ ಸಿಂಪಡಣೆ ಮಾಡಲಾಯಿತು. ಡಿಪೊ ಮ್ಯಾನೆಜರ್ ಶ್ರೀಶ ಭಟ್, ಅಧಿಕಾರಿ ಗಣೇಶ್ ಪೈ ಮತ್ತಿತರರು ಉಪಸ್ಥಿತರಿದ್ದರು.