ವಿಕ್ರಮ ನಾಡಿಗೇರ ಧಾರವಾಡ
ಹೊರ ರಾಜ್ಯಗಳಲ್ಲಿ ಈಗಾಗಲೇ ಒಕ್ಕರಿಸಿರುವ ಹಕ್ಕಿಜ್ವರ ಕರ್ನಾಟಕಕ್ಕೂ ಕಾಲಿಟ್ಟಿದೆ. ಆದರೆ ಕೆಲ ಜಿಲ್ಲೆಗಳಲ್ಲಿ ಮಾತ್ರ ಇದರ ಹಾಳಿವಳಿ ಇದ್ದು, ಧಾರವಾಡ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ಆದಾಗ್ಯೂ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಿದೆ.
ರಾಜ್ಯದ ರಾಯಚೂರು, ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕೋಳಿಗಳಲ್ಲಿ ಹಕ್ಕಿಜ್ವರ ಕಂಡು ಬಂದಿರುವುದು ಕುಕ್ಕುಟೋದ್ಯಮಿಗಳಲ್ಲಿ ಆತಂಕ ಹೆಚ್ಚಿಸಿದೆ. ಆದರೆ ಈವರೆಗೆ ಮನುಷ್ಯನಲ್ಲಿ ಈ ಜ್ವರ ಪತ್ತೆಯಾಗಿರುವ ಪ್ರಕರಣ ಕಂಡು ಬರದಿರುವುದು ಸಮಾಧಾನಕರ ಸಂಗತಿ.
ಧಾರವಾಡ ಜಿಲ್ಲೆಯಲ್ಲಿ ಹಕ್ಕಿಜ್ವರದ ಪ್ರಕರಣ ಪತ್ತೆಯಾಗಿಲ್ಲ. ಆದಾಗ್ಯೂ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಈಗಾಗಲೇ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದ್ದಾರೆ. ಕೋಳಿ ಸಾಕಣಿಕೆದಾರರಿಗೆ ಅರಿವು ಮೂಡಿಸುವ, ಒಂದೇ ಸಮಯದಲ್ಲಿ ಸಕಾರಣವಿಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಕೋಳಿಗಳು ಸಾವನ್ನಪ್ಪಿದರೆ ಏನು ಮಾಡಬೇಕು? ಕೋಳಿಗಳ ಆರೋಗ್ಯ ಕಾಪಾಡಲು ಹಾಗೂ ಕೋಳಿ ಸಾಕಣಿಕೆ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಏನೆಲ್ಲ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ರೈತರು ಹಾಗೂ ಸಾಕಣಿಕೆದಾರರಲ್ಲಿ ಜಾಗೃತಿ ಮೂಡಿಸಲಿದ್ದಾರೆ.
ಕೋಳಿಗಳು ಹಾಗೂ ಪಕ್ಷಿಗಳ ರಕ್ತ ತಪಾಸಣೆ ಮಾಡುವ ಕೆಲಸ ಸಾಮಾನ್ಯವಾಗಿ ಮಾಡಲಾಗುತ್ತದೆ. ಆದರೆ ಇದೀಗ ಆ ಸಂಖ್ಯೆ ಹೆಚ್ಚಿಸಿ ಸಮಗ್ರವಾಗಿ ತಪಾಸಣೆ ನಡೆಸಲು ಮುಂದಾಗಿದ್ದಾರೆ. ಇದಕ್ಕಾಗಿ ಜಾಗೃತಿ ತಂಡ ಸಹ ರಚಿಸಲಾಗುತ್ತಿದೆ. ಈ ವಿಚಾರವಾಗಿ ಮಾ. 3ರಂದು ಪಶು ಸಂಗೋಪನೆ, ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಜತೆಗೆ ಸಹ ಸಭೆ ನಡೆಸಿ ಸಮಗ್ರವಾಗಿ ಚರ್ಚಿಸಲಿದ್ದಾರೆ.
ಬೇಯಿಸಿದ ಮಾಂಸ ಹಾಗೂ ತತ್ತಿ ಸೇವನೆಯಿಂದ ಈ ಜ್ವರ ಬರುವುದಿಲ್ಲ. ಹಸಿ ಮಾಂಸ ಸಾಗಾಟ ಮಾಡುವವರು ಹಾಗೂ ಮಾರಾಟ ಮಾಡುವವರು ಮುನ್ನೆಚ್ಚರಿಕೆ ವಹಿಸಬೇಕು. ಕೋಳಿ ಸಾಕಣೆ ಕೇಂದ್ರ ಹಾಗೂ ಮಾಂಸ ಸಂಸ್ಕರಣೆ ಘಟಕಗಳಲ್ಲಿ ಕೆಲಸ ಮಾಡುವವರಿಗೆ ಹಕ್ಕಿಜ್ವರ ಸೋಂಕು ತಗಲುವ ಸಾಧ್ಯತೆ ಹೆಚ್ಚು. ಹೀಗಾಗಿ ಅಂತಹವರು ತಮ್ಮ ಸ್ವಚ್ಛತೆಗೆ ಆದ್ಯತೆ ನೀಡಿ ಜಾಗೃತಿ ವಹಿಸುವುದು ಸೂಕ್ತ.
ಹಕ್ಕಿಗಳು ಅಥವಾ ಕೋಳಿಗಳು ಸಂಶಯಾಸ್ಪದವಾಗಿ ಸಾವಿಗೀಡಾಗುವುದು ಕಂಡು ಬಂದರೆ ತಕ್ಷಣವೇ ಪಶು ಸಂಗೋಪನಾ ಇಲಾಖೆಗೆ ಮಾಹಿತಿ ನೀಡಬೇಕು. ನಂತರದಲ್ಲಿ ಕೋಳಿಗಳ ರಕ್ತ ತಪಾಸಣೆ ನಡೆಸಲಾಗುವುದು. ಒಂದು ವೇಳೆ ಹಕ್ಕಿಜ್ವರ ಲಕ್ಷಣ ಕಂಡು ಬಂದಲ್ಲಿ ಉಳಿದ ಕೋಳಿಗಳನ್ನು ಸಹ ನಾಶಪಡಿಸಲಾಗುತ್ತದೆ. ಇಂತಹ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶಕ್ಕೆ ಅಗತ್ಯವಾಗಿದೆ. ಹೀಗಾಗಿ ತ್ವರಿತವಾಗಿ ಜಾಗೃತಿ ಕೆಲಸ ನಡೆಸಲಾಗುವುದು ಎನ್ನುತ್ತಾರೆ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು.
*ರೋಗದ ಲಕ್ಷಣಗಳು: ಬೇಸಿಗೆ ಕಾಲದಲ್ಲಿ ಮನುಷ್ಯನಲ್ಲಿ ನಿರ್ಜಲೀಕರಣ ಕಾಣುವುದು ಸಾಮಾನ್ಯ. ಇದರಿಂದ ಆರೋಗ್ಯದಲ್ಲಿ ಕೆಲ ಏರುಪೇರಾಗಲಿದೆ. ಇದೇ ಕಾರಣಕ್ಕೆ ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ. ತೀವ್ರ ಜ್ವರ, ಭೇದಿ, ಹೊಟ್ಟೆ ನೋವು, ಮೂಗು, ಒಸಡಿನಲ್ಲಿ ರಕ್ತ ಸಾವ್ರ, ಚಳಿ, ತಲೆ ನೋವು, ವಿಪರೀತ ಮೈಕೈ ನೋವು, ಕಣ್ಣು ಕೆಂಪಗಾಗುವುದು, ಗಂಟಲು ನೋವು ಕಾಣಿಸಿಕೊಳ್ಳುತ್ತದೆ. ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಜನರು ನಿರ್ಲಕ್ಷ್ಯ ಮಾಡದೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ.
ರಾಜ್ಯದ ಕೆಲ ಜಿಲ್ಲೆಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಹಕ್ಕಿಜ್ವರ ಕಂಡು ಬಂದಿಲ್ಲ. ಆದಾಗ್ಯೂ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದ್ದೇವೆ. ಜಿಲ್ಲಾಧಿಕಾರಿ ಜತೆಗೆ ಇಲಾಖೆ ಅಧಿಕಾರಿಗಳು ಸಮಗ್ರ ಚರ್ಚೆ ನಡೆಸಿ ಮುಂದಿನ ಕ್ರಮ ವಹಿಸಲಾಗುವುದು. ಕೋಳಿ, ಪಕ್ಷಿಗಳ ರಕ್ತ ತಪಾಸಣೆ ನಡೆಸಲಾಗುವುದು. ಕೋಳಿ ಸಾಕಣಿಕೆ ಮಾಡುವವರು ಎಚ್ಚರ ವಹಿಸಬೇಕು. ಒಂದೇ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಕೋಳಿಗಳು ಅಸಹಜವಾಗಿ ಸಾವನ್ನಪ್ಪಿದರೆ ಇಲಾಖೆಗೆ ಮಾಹಿತಿ ನೀಡಬೇಕು.
* ರವಿ ಸಾಲಿಗೌಡರ, ಉಪ ನಿರ್ದೇಶಕರು, ಪಶು ಪಾಲನಾ ಮತ್ತು ಪಶು ವೈದ್ಯಕಿಯ ಇಲಾಖೆ