ಚಿಕ್ಕಮಗಳೂರು: ಜಿಲ್ಲೆಯಲ್ಲಿ ಡೆಂಘೆ ಜ್ವರ ಹೆಚ್ಚುತ್ತಿರುವುದನ್ನು ತಡೆಗಟ್ಟಲು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ವಿವಿಧ ಇಲಾಖೆಗಳ ಸಹಯೋಗದಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸೀಮಾ ತಿಳಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಡೆಂಘೆ ನಿಯಂತ್ರಣಕ್ಕೆ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈಗಾಗಲೇ ಎಲ್ಲ ಅಂಗನವಾಡಿ, ಶಾಲಾ-ಕಾಲೇಜುಗಳ ಸುತ್ತ-ಮುತ್ತ ಪರಿಸರವನ್ನು ಸ್ವಚ್ಚಗೊಳಿಸಿ ಫಾಗಿಂಗ್ ಮಾಡುವ ಮೂಲಕ ಸೊಳ್ಳೆಗಳು ಉತ್ಪತ್ತಿಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ. ನಗರಸಭೆಯಿಂದ ನಗರದ ಎಲ್ಲ ವಾರ್ಡ್ಗಳಲ್ಲಿ ಫಾಗಿಂಗ್ ಮಾಡಿ, ಸೊಳ್ಳೆ ಬರದಂತೆ ತಡೆಗಟ್ಟಲು ಸರ್ಕಾರ ಆದೇಶ ಮಾಡಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ನಿರಂತರವಾಗಿ ಲಾರ್ವಾ ಸರ್ವೆ ಮಾಡುತ್ತಿದ್ದು, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಹಾಗೂ ಇಲಾಖೆ ಸಿಬ್ಬಂದಿ ಡೆಂಘೆ ತಡೆಗಟ್ಟಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಹಲವಾರು ಬಾರಿ ಜನಜಾಗೃತಿ ಮೂಡಿಸಿದ್ದರೂ ಸಾರ್ವಜನಿಕರು ಎಲ್ಲೆಂದರಲ್ಲಿ ತೆಂಗಿನ ಚಿಪ್ಪು, ಎಳನೀರು ಬುರುಡೆ, ಟೈರು ಹಾಕುತ್ತಿರುವುದರಿಂದ ನೀರು ಸಂಗ್ರಹವಾಗಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಇದರಿಂದ ಡೆಂಘೆ ಬರುವ ಸಾಧ್ಯತೆ ಇರುವುದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಮನೆಗೆ ಬಂದಾಗ ಅವರು ನೀಡುವ ಸಲಹೆಗಳನ್ನು ಪಾಲಿಸುವ ಮೂಲಕ ಡೆಂಘೆ ನಿಯಂತ್ರಣಕ್ಕೆ ಜನ ಸಹಕರಿಸುವಂತೆ ಮನವಿ ಮಾಡಿದರು.
ಚಿಕ್ಕಮಗಳೂರು ತಾಲೂಕಿನಲ್ಲಿ ಜನವರಿಯಿಂದ ಇದುವರೆಗೆ ೪೧೩ ಪ್ರಕರಣಗಳು ದಾಖಲಾಗಿದ್ದು, ಜು. ೧೫ ರವರೆಗೆ ೨೮ ಡೆಂಘೆ ಸಕ್ರಿಯ ಪ್ರಕರಣಗಳು ಇದ್ದು, ಯಾವುದೇ ಸಾವುನೋವು ಸಂಭವಿಸಿಲ್ಲ. ಸಾರ್ವಜನಿಕರು ಸೊಳ್ಳೆಯಿಂದ ಕಚ್ಚಿಸಿಕೊಳ್ಳದಂತೆ ಜಾಗ್ರತೆ ವಹಿಸಿ ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಿದರು.
ಮೊದಲು ಸಾಮಾನ್ಯವಾಗಿ ಜ್ವರ ಕಾಣಿಸಿಕೊಳ್ಳುತ್ತದೆ. ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖAಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು ಡೆಂಘೆ ರೋಗದ ಪ್ರಮುಖ ಲಕ್ಷಣಗಳಾಗಿವೆ. ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತವೆ ಎಂದು ಮಾಹಿತಿ ನೀಡಿದರು.
ತಹಸೀಲ್ದಾರ್ ಸುಮಂತ್ ಮಾತನಾಡಿ, ಇಂದು ನಡೆದ ತಾಲೂಕು ಮಟ್ಟದ ಸಮನ್ವಯ ಸಭೆಯಲ್ಲಿ ನಿರ್ಧಾರವಾದಂತೆ ಎಲ್ಲ ಇಲಾಖೆಗಳಿಗೆ ಡೆಂಘೆ ಜ್ವರ ನಿಯಂತ್ರಣ ಕುರಿತು ಮುಂಜಾಗ್ರತಾ ಕ್ರಮ ಅನುಸರಿಸುವ ಬಗ್ಗೆ ಮಾಹಿತಿ ನೀಡಲಾಗಿದೆ. ನಗರ ವ್ಯಾಪ್ತಿಯ ಎಲ್ಲ ವಾರ್ಡ್ಗಳಲ್ಲಿ ನೀರು ನಿಲ್ಲದಂತೆ ಹಾಗೂ ಚರಂಡಿಗಳನ್ನು ಸ್ವಚ್ಚಗೊಳಿಸಲು ನಗರಸಭೆಗೆ ಸೂಚನೆ ನೀಡಲಾಗಿದೆ. ತಾಲೂಕಿನ ೯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ಡೆಂಘೆ ಪ್ರಕರಣ ಹೆಚ್ಚು ಇರುವ ಗ್ರಾಮಗಳಲ್ಲಿ ಫಾಗಿಂಗ್ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಬಿಸಿಎಂ ಹಾಸ್ಟೆಲ್, ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಹಾಸ್ಟೆಲ್‌ಗಳಲ್ಲಿ ಸ್ವಚ್ಚತೆ ಕಾಪಾಡಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಅಂಗನವಾಡಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದ ಬಟ್ಟೆ ಧರಿಸಬೇಕು ಹಾಗೂ ಒಡಮಸ್ ಹಚ್ಚಿಕೊಳ್ಳುವಂತೆ ಕೋರಲಾಗಿದೆ ಎಂದರು.
ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಎಸ್.ಆರ್.ಬಡಿಗೇರ್, ಆರೋಗ್ಯ ಇಲಾಖೆಯ ಡಾ.ದಿವ್ಯ, ಡಾ.ಶ್ವೇತಾ, ಬೇಬಿ, ನಿರ್ಮಲಾ ಮತ್ತಿತರರಿದ್ದರು.