ಜಿಲ್ಲೆ

ಮುಂಜಾಗ್ರತೆಯಿಂದ ಆರೋಗ್ಯ ರಕ್ಷಣೆ

ಡಿಎಚ್‌ಒ ಡಾ. ಮಹೇಶ್‌ಕುಮಾರ್ ಸಲಹೆ | ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ನ್ಯುಮೋನಿಯಾ ತಡೆ ಅಭಿಯಾನ

 ಚಿಕ್ಕಬಳ್ಳಾಪುರ : ಕಾಯಿಲೆಗಳ ಹರಡುವಿಕೆಯನ್ನು ಗಂಭೀರವಾಗಿ ಪರಿಗಣಿಸಿ ಮುಂಜಾಗ್ರತಾ ಕ್ರಮ ಪಾಲನೆಯೊಂದಿಗೆ ಆರೋಗ್ಯ ಕಾಪಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ಮಹೇಶ್ ಕುಮಾರ್ ಸಲಹೆ ನೀಡಿದರು.

ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರ ಹಮ್ಮಿಕೊಂಡಿದ್ದ ನ್ಯುಮೋನಿಯಾ ತಡೆಗಟ್ಟುವ ಅಭಿಯಾನ ಮತ್ತು ಸಪ್ತಾಹ ಉದ್ದೇಶಿಸಿ ಮಾತನಾಡಿದರು.

ಆರೋಗ್ಯ ಸಮಾಜ ನಿರ್ಮಾಣದ ದೃಷ್ಟಿಯಿಂದ ಸರ್ಕಾರವು ವಿವಿಧ ಯೋಜನೆಗಳಡಿ ಬಹೂಪಯೋಗಿ ಸವಲತ್ತುಗಳನ್ನು ಒದಗಿಸುವುದರ ಜತೆಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದರ ಬಗ್ಗೆ ಜನರು ಸಮರ್ಪಕ ಮಾಹಿತಿ ಹೊಂದಿದ್ದಾಗ ಸದ್ಬಳಕೆ ಸಾಧ್ಯವಾಗುತ್ತದೆ ಎಂದರು.

ನಂದಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ.ಮಂಜುನಾಥ್, ಜಿಲ್ಲಾ ಶಸಚಿಕಿತ್ಸಕಿ ಡಾ. ಮಂಜುಳಾದೇವಿ, ಆರ್‌ಸಿಎಚ್‌ಒ ಡಾ. ಸಂತೋಷ್ ಬಾಬು, ನೋಡಲ್ ಅಧಿಕಾರಿ ಡಾ. ವಿಜಯಾ, ಕಾರ್ಯಕ್ರಮ ಅಧಿಕಾರಿ ಡಾ. ಚಂದ್ರಶೇಖರ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಮಂಜುಳಾ, ಮಕ್ಕಳ ವೈದ್ಯರಾದ ಡಾ. ಪ್ರಕಾಶ್, ಡಾ. ಸುಜಾತಾ, ಡಾ.ರಚನ್ ಮತ್ತಿತರರು ಇದ್ದರು.

ಮಕ್ಕಳ ಮರಣ ಪ್ರಮಾಣದಲ್ಲಿ ಹೆಚ್ಚಳ

ನ್ಯುಮೋನಿಯಾದಿಂದ 5 ವರ್ಷದೊಳಗಿನ ಮಕ್ಕಳು ಮೃತಪಡುತ್ತಿರುವ ಪ್ರಮಾಣ ಹೆಚ್ಚುತ್ತಿದೆ ಎಂದು ಮಕ್ಕಳ ತಜ್ಞ ಡಾ.ರವಿಕುವಾರ್ ಕಳವಳ ವ್ಯಕ್ತಪಡಿಸಿದರು. ಮಕ್ಕಳ ಶ್ವಾಸಕೋಶದಲ್ಲಿ ಸೋಂಕು ಉಂಟಾಗಿ ಅಸಹಜ ಉಸಿರಾಟ ಸಮಸ್ಯೆಗಳು ಕಂಡುಬರುತ್ತಿವೆ. ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆಯ ಲಕ್ಷಣಗಳು ಧೀರ್ಕಾಲ ಇದ್ದಾಗ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಪಾಲಕರು ಸ್ಥಳೀಯ ತಜ್ಞವೈದ್ಯರ ಬಳಿ ಚಿಕಿತ್ಸೆ ಕೊಡಿಸಬೇಕು. ಇದನ್ನು ಬಿಟ್ಟು ಸ್ವಯಂಪ್ರೇರಣೆಯಿಂದ ಯಾವುದೇ ಔಷಧ ನೀಡಬಾರದು ಎಂದು ಸಲಹೆ ನೀಡಿದರು. ನಿರ್ದಿಷ್ಟ ಕಾಯಿಲೆಗೆ ನಿರ್ದಿಷ್ಟ, ನಿಗದಿತ ಪ್ರವಾಣದ ಔಷಧ ನೀಡುವುದು ಉತ್ತಮ ವೈದ್ಯಕೀಯ ಚಿಕಿತ್ಸಾ ಪದ್ಧತಿಯಾಗಿದೆ. ಇದನ್ನು ಪಾಲಿಸಬೇಕು. ಇಲ್ಲದಿದ್ದಲ್ಲಿ ಕಾಯಿಲೆಗಳು ಉಲ್ಬಣಗೊಂಡು ತೊಂದರೆ ಅನುಭವಿಸಬೇಕಾಗುತ್ತದೆ ಎಂದರು. ಸಮಸ್ಯಾತ್ಮಕ ನವಜಾತ ಶಿಶು, ಮಕ್ಕಳಿಗೆ ಸೂಕ್ತ ಚಿಕಿತ್ಸೆಯ ಜತೆಗೆ ಕಡ್ಡಾಯವಾಗಿ ತಾಯಿಹಾಲು, ಅಗತ್ಯ ಪೌಷ್ಟಿಕಾಂಶಗಳನ್ನು ನೀಡಬೇಕು.

ಮನೆಯಲ್ಲಿ ಸೌದೆ ಹೊಗೆ, ಸೊಳ್ಳೆ ಬತ್ತಿ ಸೇರಿ ಇತರ ಯಾವುದೇ ಹೊಗೆಯಿಂದ ಮಗುವಿನ ಆರೋಗ್ಯದ ಮೇಲೆ ನಕಾರಾತ್ಮಕ ಮತ್ತು ನೇರ ಪರಿಣಾಮ ಬೀರಲಿದ್ದು ವಾಲಿನ್ಯರಹಿತ ವಾತವರಣದಲ್ಲಿರಿಸಬೇಕು ಎಂದರು.

ನ್ಯುಮೋನಿಯಾ ತಡೆ ಸಪ್ತಾಹ

ಜಿಲ್ಲೆಯಲ್ಲಿ 2025ನೇ ಸಾಲಿನ ಫೆ.28ರವರೆಗೆ ನ್ಯುಮೋನಿಯಾ ತಡೆ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ನವಜಾತ ಶಿಶು ಸಪ್ತಾಹದ ಹಿನ್ನೆಲೆಯಲ್ಲಿ ವಿವಿಧ ಚಟುವಟಿಕೆ ಕೈಗೊಳ್ಳಲಾಗಿದೆ. ತಾಲೂಕು ಮಟ್ಟದ ಜಾಗೃತಿ ಕಾರ್ಯಕ್ರಮ, ಆಶಾ ಕಾರ್ಯಕರ್ತೆಯರು ಮತ್ತು ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ನ್ಯುಮೋನಿಯಾ ಕಾಯಿಲೆಯನ್ನು ಗುರ್ತಿಸುವುದು ಹೇಗೆ? ವಾರ್ಗಸೂಚಿ ಆರೋಗ್ಯ ಚಿಕಿತ್ಸಾ ಕ್ರಮಗಳ ಬಗ್ಗೆ ಮಾರ್ಗದರ್ಶನ ತರಬೇತಿ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.