ನರೇಗಲ್ಲ: ಈಡಿಸ್ ಸೊಳ್ಳೆ ಕಚ್ಚುವಿಕೆಯಿಂದ ಹರಡುವ ಡೆಂಘಯನ್ನು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವ ಮೂಲಕ ನಿಯಂತ್ರಣಕ್ಕೆ ತರಬಹುದು ಎಂದು ವೈದ್ಯ ಡಾ. ಎಸ್.ಎ. ಬಿರಾದಾರ ಹೇಳಿದರು.
ಸಮೀಪದ ಅಬ್ಬಿಗೇರಿಯ ಬಾಲಕರ ಸರ್ಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ ರೋಣ ಆರ್.ಬಿ.ಎಸ್.ಕೆ. ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಡೆಂಘ ಜ್ವರ ಹರಡುವಿಕೆ ಮತ್ತು ಮುಂಜಾಗ್ರತೆ ಕ್ರಮಗಳನ್ನು ಅನುಸರಿಸುವ ಕುರಿತು 5 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಅವರು ವಿಶೇಷ ಉಪನ್ಯಾಸ ನೀಡಿದರು.
ನೀರಿನ ತೊಟ್ಟಿ, ಡ್ರಮ್ ಬ್ಯಾರಲ್ ಮುಂತಾದವುಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿಸಿ ಒಣಗಿಸಿ ಮತ್ತೆ ಭರ್ತಿ ಮಾಡಿಕೊಳ್ಳಬೇಕು. ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಟಯರ್, ಎಳೆನೀರು ಚಿಪ್, ಒಡೆದ ಬಾಟಲಿ ಮುಂತಾದವುಗಳನ್ನು ಮಳೆ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು. ಸೊಳ್ಳೆ ಪರದೆ ಬಳಸಬೇಕು ಎಂದರು.
ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ- ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು, ವಾಕರಿಕೆ, ವಾಂತಿ, ಆಂತರಿಕ ರಕ್ತಸ್ರಾವ, ಒಸಡುಗಳಲ್ಲಿ ರಕ್ತಸ್ರಾವವಾಗುವುದು ಡೆಂಘ ಜ್ವರದ ಲಕ್ಷಣಗಳಾಗಿವೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದಲ್ಲಿ, ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ. ಡೆಂಘೆ ಜ್ವರದ ತಪಾಸಣೆ, ರಕ್ತ ಪರೀಕ್ಷೆ ಹಾಗೂ ಚಿಕಿತ್ಸೆಯನ್ನು ಉಚಿತವಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಪಡೆದುಕೊಳ್ಳಬಹುದು ಎಂದರು.
ಡಾ. ಎಸ್.ಪಿ. ಸಾರಾಂಗಮಠ ಮಾತನಾಡಿ, ಡೆಂಘೆ ನಿಯಂತ್ರಿಸಲು ಮನೆ ಸುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದರು.
ವೈದ್ಯ ಸಿಬ್ಬಂದಿ ನಾಗರಾಜ, ಪ್ರವೀಣ ಮಕ್ಕಳ ತಪಾಸಣೆ ನಡೆಸಿದರು. ಆರ್.ವಿ. ಬೆಲ್ಲದ, ಆರ್.ಡಿ. ರಂಗಣ್ಣವರ, ಜೆ.ಜಿ. ಬಿಸರಳ್ಳಿ, ಎಂ.ಎಸ್. ಗುಡಿಹಿಂದಲ, ಎಚ್.ವೈ. ದೊಡ್ಡಮನಿ, ಎ.ಎಸ್. ಎಲ್ರೆಡ್ಡಿ, ಬಿ.ಜಿ. ಕೊವಳ್ಳಿ, ಶ್ರೀದೇವಿ ಜಿ., ದೀಪಾ ಎಸ್., ಮಂಜುನಾಥ ಪಲ್ಲೇದ, ವಿ.ಜಿ. ಬದಿ, ಇತರರಿದ್ದರು.