ಜಿಲ್ಲೆ

ಪ್ರಾಮಾಣಿಕ ವ್ಯಕ್ತಿಯ ದಾನ ಸ್ವೀಕಾರಾರ್ಹ

ಹರಿಹರ: ಪ್ರಾಮಾಣಿಕವಾಗಿ ದುಡಿದ ವ್ಯಕ್ತಿಯ ದಾನವು ಶ್ರೇಷ್ಠ, ಅಂತಹ ದಾನಗಳು ಮಾತ್ರ ಸ್ವೀಕಾರ ಮಾಡಲು ಅರ್ಹ ಎಂದು ಹೊಳೆಸಿರಿಗೆರೆಯ ಆಧ್ಯಾತ್ಮಿಕ ಪ್ರವಚನಕಾರ ಡಿ. ಸಿದ್ದೇಶ್ ಹೇಳಿದರು.

ಜಿಲ್ಲೆಯ ಕದಳಿ ಮಹಿಳಾ ವೇದಿಕೆಗಳ ಹರಿಹರ ತಾಲೂಕು ಘಟಕದ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಗಿರಿಯಮ್ಮ ಆರ್. ಕಾಂತಪ್ಪ ಶ್ರೇಷ್ಠಿ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ವಚನೋತ್ಸವ- ಶರಣೆಯರ ವಚನಗಳ ಗಾಯನ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

800 ವರ್ಷಗಳ ಹಿಂದೆಯೇ ವಚನಕಾರರು ದಾನಗಳ ಉಲ್ಲೇಖ ಮಾಡಿದ್ದು, ವಾಮಮಾರ್ಗದಿಂದ ಶ್ರೀಮಂತರಾದವರ ದಾನವು ಮಠ, ಮಂದಿರ, ದೇವಸ್ಥಾನಗಳಿಗೆ ಸ್ವೀಕಾರ್ಹವಲ್ಲ. ಈಗಿನ ಆಧ್ಯಾತ್ಮಿಕ ಸಂಸ್ಥೆಗಳು ಪ್ರಾಮಾಣಿಕ ವ್ಯಕ್ತಿಗಳಿಂದಲೇ ದಾನ ಪಡೆಯಲು ಆದ್ಯತೆ ನೀಡಬೇಕೆಂದು ಅಭಿಪ್ರಾಯಪಟ್ಟರು.

ಬಸವಣ್ಣರ ಕಾಲದಲ್ಲಿ ಮಹಿಳಾ ವಚನಾಕಾರ್ತಿಯರು ದೊಡ್ಡ ಸಂಖ್ಯೆಯಲ್ಲಿದ್ದರು. ಆದರೆ ಅವರಲ್ಲಿ ಬಹುತೇಕರ ಪರಿಚಯ ಜನಸಾಮಾನ್ಯರಿಗಿಲ್ಲ. ಒಲೆ ಚನ್ನಾಗಿದ್ದರೆ ಕುಟುಂಬದ ಸದಸ್ಯರ ತಲೆ ಚನ್ನಾಗಿರುತ್ತದೆ ಎಂದು ವಚನಕಾರ್ತಿಯೊಬ್ಬರು ಹೇಳಿರುವುದು ಸೂಕ್ತವಾಗಿದೆ ಎಂದು ಹೇಳಿದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಮಾತನಾಡಿ, ಕದಳಿ ಮಹಿಳಾ ವೇದಿಕೆ ಸಂಸ್ಥೆಯು ಜಿಲ್ಲೆಯಲ್ಲಿ ಸದ್ದಿಲ್ಲದೆ ವಚನಗಳ ಪ್ರಚಾರ ಕಾರ್ಯವನ್ನು ನಡೆಸುತ್ತಿದೆ. ಮುತ್ತು, ರತ್ನಗಳಿಗಿಂತ ಶ್ರೇಷ್ಠವೆನಿಸಿದ ವಚನಗಳನ್ನು ಜನರಿಗೆ ತಲುಪಿಸುವ ಅಗತ್ಯ ಈಗಿನ ಕಲುಷಿತ ವಾತಾವರಣದಲ್ಲಿ ಹೆಚ್ಚಾಗಿದೆ ಎಂದರು.

ವೇದಿಕೆ ಜಿಲ್ಲಾಧ್ಯಕ್ಷೆ ಮಮತಾ ನಾಗರಾಜ್ ಮಾತನಾಡಿ, ಭತ್ತವನ್ನು ಹದ ತಪ್ಪಿ ಕುಟ್ಟಿದರೆ ಅಕ್ಕಿಯ ಬದಲು ನುಚ್ಚು ಪಡೆಯಬೇಕಾಗುತ್ತದೆ. ಹಾಗೆಯೇ ಬದುಕು ನುಚ್ಚು ನೂರಾಗದಂತೆ ತಡೆಯಲು ವಚನಗಳ ಸಾಂಗತ್ಯ ಸಹಾಯ ಮಾಡುತ್ತದೆ. ವಚನಗಳನ್ನು ಜನರ ಬಳಿಗೆ ತಲುಪಿಸಲು ಕದಳಿ ಸಂಸ್ಥೆಯಿಂದ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ವಚನೋತ್ಸವದ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದರು.

12ನೇ ಶತಮಾನದ ವಚನಕಾರ್ತಿಯರಾದ ಅಕ್ಕಮಹಾದೇವಿ, ಸತ್ಯಕ್ಕ, ಅಕ್ಕನಾಗಮ್ಮ, ಆಯ್ದಕ್ಕಿ ಲಕ್ಕಮ್ಮ ಹಾಗೂ ನೀಲಮ್ಮ ಇವರ ಆಯ್ದ 5 ವಚನಗಳಿಗೆ ವೇದಿಕೆಯ ಗೌರವ ಸಲಹೆಗಾರರಾದ ಯಶಾ ದಿನೇಶ್ ಇವರ ಮಾರ್ಗದರ್ಶನದಲ್ಲಿ ಗಾಯನ ತರಬೇತಿ ನೀಡಲಾಯಿತು.

ಜಿಲ್ಲಾ ಸಮಿತಿ ಗೌರವ ಸಲಹೆಗಾರರಾದ ಯಶಾ ದಿನೇಶ್ ಅವರು ವೇದಿಕೆಯ ಹರಿಹರ ಘಟಕಕ್ಕೆ 5 ಸಾವಿರ ರೂ. ದೇಣಿಗೆ ನೀಡಿದರು. ವೇದಿಕೆಯ ತಾಲೂಕು ಘಟಕದ ಅಧ್ಯಕ್ಷೆ ರೂಪಾ ನಾಗರಾಜ್, ಗೌರವಾಧ್ಯಕ್ಷೆ ಸುನಿತಾ ಮಾರವಳ್ಳಿ, ಹೊನ್ನಾಳಿ ಘಟಕದ ಅಧ್ಯಕ್ಷೆ ಪ್ರತಿಮಾ, ಪದಾಧಿಕಾರಿಗಳಾದ ಆಶಾ ಕುಂಠೆ, ಕುಸುಮಾ, ತುಂಗಾ ಮುನಿಯಪ್ಪ, ಮಲ್ಲೇಶ್, ನಗರಸಭೆ ಮಾಜಿ ಉಪಾಧ್ಯಕ್ಷೆ ಅಂಬುಜಾ ರಾಜೊಳ್ಳಿ, ಅನಿತಾ ಪಾಟೀಲ್ ಇದ್ದರು.