ಲಕ್ಷ್ಮೇಶ್ವರ: ಪಟ್ಟಣ ಸೇರಿ ತಾಲೂಕಿನ ಹಲವೆಡೆ ಸೋಮವಾರ ಮಧ್ಯಾಹ್ನ ಜೋರಾದ ಗಾಳಿ, ಗುಡುಗು- ಸಿಡಿಲಬ್ಬರದೊಂದಿಗೆ ಅರ್ಧ ಗಂಟೆ ಮಳೆ ಸುರಿದು ಇಳೆಯನ್ನು ತಂಪಾಗಿಸಿತು.
ಕಳೆದೊಂದು ವಾರದಿಂದ ಆಗಾಗ ಮುಂಗಾರು ಪೂರ್ವ ಮಳೆ ಸುರಿಯುತ್ತಿರುವುದು ರೈತರಲ್ಲಿ ಭರವಸೆ ಮೂಡಿಸಿದೆ. ಈ ಮಳೆ ನೀರಾವರಿಯಲ್ಲಿ ಶೇಂಗಾ ಬೆಳೆದು ಒಕ್ಕಲಿ ಮಾಡುತ್ತಿರುವ ರೈತರಿಗೆ ಕೊಂಚ ಅಡಚಣೆ ಮಾಡಿದೆ. ಇನ್ನು ಆಣಿಕಲ್ಲು ಮಳೆಯಾಗುತ್ತಿರುವುದರಿಂದ ವಿಳ್ಯದೆಲೆ, ಹೂವು, ಮಾವು ಬೆಳೆ ಹಾನಿಗೆ ಕಾರಣವಾಗುತ್ತಿದೆ. ಗಾಳಿ, ಗುಡುಗು, ಸಿಡಿಲಬ್ಬರದಿಂದ ಮರ, ಕಂಬ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದೆ. ತ್ಯಾಜ್ಯದಿಂದ ತುಂಬಿರುವ ಚರಂಡಿಗಳ ಸ್ವಚ್ಛತೆಗೆ ಈ ಮಳೆ ಮುನ್ಸೂಚನೆ ನೀಡುತ್ತಿದ್ದು ಪುರಸಭೆಯವರು ಕಾರ್ಯಪೃವೃತ್ತರಾಗಬೇಕಿದೆ. ಮಾಗಿ ಉಳುಮೆಗೆ ಮತ್ತು ಕೆರೆ ಕಟ್ಟೆಗಳಲ್ಲಿ ನೀರಿಲ್ಲದೇ ಜಾನುವಾರುಗಳು, ಕುರಿ- ಮೇಕೆಗಳು ನೀರಿಗಾಗಿ ಪರಿತಪಿಸುವಂತ ಪರಿಸ್ಥಿತಿ ಇದ್ದು ಒಂದಷ್ಟು ದೊಡ್ಡ ಪ್ರಮಾಣದ ಮಳೆಯಾದರೆ ಅನುಕೂಲವಾಗುತ್ತದೆ ಎಂಬುದು ರೈತರ ಅಂಬೋಣ.