ಹುಬ್ಬಳ್ಳಿ : ಮತ್ತಿಕೊಪ್ಪದ ಐಸಿಎಆರ್-ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ ಹಾಗೂ ಧಾರವಾಡದ ಎಡಿಎಂ ಅಗ್ರೋ ಇಂಡಸ್ಟ್ರೀಜ್ ಇಂಡಿಯಾ ಪ್ರೆ್ತ್ರ. ಲಿ. ಸಹಯೋಗದಲ್ಲಿ ಹುಬ್ಬಳ್ಳಿಯ ಕೆಎಲ್ಇ ಸಂಸ್ಥೆಯ ಬಿವಿಬಿ ಇಂಜೀನಿಯರಿಂಗ್ ಕಾಲೇಜು ಆವರಣದಲ್ಲಿ ರೈತರಿಗಾಗಿ ಪೂರ್ವ ಮುಂಗಾರು ಸಿದ್ಧತೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, 2011 ರಲ್ಲಿ ರೈತರ ಶ್ರೇಯೋಭಿವೃದ್ಧಿಗಾಗಿ ಸ್ಥಾಪನೆಗೊಂಡ ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರವು ಉತ್ತಮ ಗುಣಮಟ್ಟದ ಬೀಜ, ಮಣ್ಣು ಪರೀಕ್ಷೆ, ಸಸ್ಯ ಸಂರಕ್ಷಣೆ ಹಾಗೂ ಅನೇಕ ತಂತ್ರಜ್ಞಾನದ ವಿಸ್ತರಣೆಯಲ್ಲಿ ಅಗತ್ಯ ಮಾಹಿತಿ ನೀಡುವ ಮೂಲಕ ರೈತರ ಸೇವೆ ಸಲ್ಲಿಸುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ
ಡಾ. ಎಸ್.ಎ. ಗದ್ದನಕೇರಿ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರವು ರೈತರಿಗೆ ಬೀಜ ಪೂರೈಕೆ ಹಾಗೂ ತಂತ್ರಜ್ಞಾನ ಪ್ರಸಾರದಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿದೆ. ದೇಶ ಖಾದ್ಯ ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.
ಕೃಷಿ ವಿಶ್ವವಿದ್ಯಾಲಯವು ಅಭಿವೃದ್ಧಿ ಪಡಿಸಿದ ನೂತನ ತಳಿಯ ಬೀಜ ಪೂರೈಕೆ, ಬೇಸಾಯ ಕ್ರಮ ಹಾಗೂ ಮಣ್ಣು ಆರೋಗ್ಯ ಕುರಿತಾದ ತರಬೇತಿಯು ನಿರೀಕ್ಷಿತ ಫಲಿತಾಂಶವನ್ನು ನೀಡಿ, ಬೆಳೆ ಉತ್ಪಾದಕತೆ ಅಧಿಕಗೊಳ್ಳುವ ಮೂಲಕ ರೈತನ ಆದಾಯ ಹೆಚ್ಚು ಆಗುವುದರಲ್ಲಿ ಸಂಶಯವಿಲ್ಲ ಎಂದರು.
ಎಡಿಎಂ ಅಗ್ರೋ ಇಂಡಸ್ಟ್ರೀಜ್ ಇಂಡಿಯಾ ಪ್ರೆ್ತ್ರ. ಲಿ., ಧಾರವಾಡದ ಸಹ ವ್ಯವಸ್ಥಾಪಕ ನಾಗರಾಜ ಕಾಮತ ಮಾತನಾಡಿ, ಎಡಿಂ ಸಂಸ್ಥೆಯು ಜಗತ್ತಿನಲ್ಲಿ ಬೇರೆ ಬೇರೆ ದೇಶಗಳಲ್ಲಿ ಖಾದ್ಯ ತೈಲ ಉತ್ಪಾದನೆ ಮಾಡುತ್ತಿದ್ದು, ಭಾರತದಲ್ಲೂ ಗುಣಮಟ್ಟದ ಖಾದ್ಯ ತೈಲ ಉತ್ಪಾದನೆಯಲ್ಲಿ ತೊಡಗಿದೆ ಎಂದು ತಿಳಿಸಿದರು.
ಎಡಿಎಮ್ ಸಂಸ್ಥೆಯ ಕಾಪೋರೇಟ್ ಸೋಷಿಯಲ್ ಜವಾಬ್ದಾರಿ ಭಾಗವಾಗಿ ಸಾಮಾಜಿಕ ಕಾಳಜಿ ಯೋಜನೆಯಡಿ ರೈತರಿಗೆ ಬೀಜ ವಿತರಣೆ ಹಾಗೂ ತಂತ್ರಜ್ಞಾನದ ವರ್ಗಾವಣೆಗಾಗಿ ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ರೈತರು ತರಬೇತಿಯ ಲಾಭ ಪಡೆಯಬೇಕು ಎಂದು ಸಲಹೆ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಶ್ರೀದೇವಿ ಅಂಗಡಿ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದಿಂದ ರೈತರ ಜಮೀನುಗಳಲ್ಲಿ ತಂತ್ರಜ್ಞಾನದ ಪರೀಕ್ಷೆ, ಪ್ರಾತ್ಯಕ್ಷಿಕೆ, ತರಬೇತಿ, ಬೀಜೋತ್ಪಾದನೆ ಹಾಗೂ ಕೇಂದ್ರದ ಇತರ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಬೇಸಾಯ ತಜ್ಞ ಅಂಜಿನಪ್ಪ ಹನಿ ನೀರಾವರಿ ಕುರಿತು ಮಾಹಿತಿ ನೀಡಿದರು, ಕೇಂದ್ರದ ವಿಜ್ಞಾನಿ ಎಸ್.ಎಂ. ವಾರದ, ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ಹಾಗೂ ಜಿ. ಬಿ. ವಿಶ್ವನಾಥ ಅವರು ಬೇಸಾಯ ಕ್ರಮಗಳ ಕುರಿತು ಮಾಹಿತಿ ನೀಡಿದರು. ಡಾ. ಆರ್.ಆರ್. ಪಾಟೀಲ ಅವರು ಸೋಯಾಬಿನ್ನಲ್ಲಿ ಕೀಟ ನಿರ್ವಹಣೆ ಕುರಿತು ವಿವರಿಸಿದರು. ಧಾರವಾಡ ಜಿಲ್ಲೆಯ ಸೋಯಾಬಿನ್ ಬೆಳೆಯುವ 400 ರೈತರು ಭಾಗವಹಿಸಿದ್ದರು. ರಕ್ಷಿತಾ ಕೆ. ಆರ್. ಸ್ವಾಗತಿಸಿದರು. ವಿಜ್ಞಾನಿ ಜಿ. ಬಿ. ವಿಶ್ವನಾಥ ವಂದಿಸಿದರು.