ಜಿಲ್ಲೆ

ಹೊಳೆ, ಕೆರೆ, ಈಜುಕೊಳಗಳಂತಾದ ರಸ್ತೆ - ವಾಹನ ಸವಾರರ ಪರದಾಟ - ಮಳೆಗಾಲಪೂರ್ವ ಸಿದ್ಧತೆ ವಿಫಲ

Mangaluru - Nishantha Narayana

ಪುತ್ತೂರು: ಮುಂಗಾರಿನ ಅಬ್ಬರ ಪ್ರಾರಂಭವಾಗಿದ್ದು, ಮಳೆಗಾಲದ ಪೂರ್ವ ಸಿದ್ಧತೆ ವೈಫಲ್ಯ ರಸ್ತೆಗಳಲ್ಲಿ ತೆರೆದುಕೊಳ್ಳುತ್ತಿದೆ. ಪ್ರಮುಖ ರಸ್ತೆಗಳಲ್ಲಿ ಹೊಳೆ, ಕೆರೆ, ಈಜುಕೊಳಗಳ ನಿರ್ಮಾಣವಾಗಿ ವಾಹನ ಸವಾರರು ತೇಲಾಡುವ ಸ್ಥಿತಿ ನಿರ್ಮಾಣವಾಗಿದೆ. ಚರಂಡಿಯಲ್ಲಿ ಹರಿಯಬೇಕಾದ ಮಳೆ ನೀರು ರಸ್ತೆಯಲ್ಲೇ ಹರಿಯುವಂಥ ಹೊಸ ಅವಿಷ್ಕಾರಗಳನ್ನು ಅಽಕಾರಿ ವರ್ಗ ಮಾಡಿ ಹೊಸ ಸಾಧನೆ ಮಾಡಿದ್ದಾರೆ!


ಮಳೆಗಾಲ ಪ್ರಾರಂಭವಾಗುವ ಮೊದಲು ಹೆದ್ದಾರಿ, ಮುಖ್ಯರಸ್ತೆ, ಒಳರಸ್ತೆಗಳ ಚರಂಡಿ ಸರಿಪಡಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಆದರೆ ಕರಾವಳಿ ಭಾಗದಲ್ಲಿ ಯಾವ ಸರ್ಕಾರ ಬಂದರೂ, ಮಳೆ ಪ್ರಾರಂಭವಾಗುವ ಮೊದಲು ಸಮರ್ಪಕ ಕೆಲಸ ನಡೆಯುತ್ತಿಲ್ಲ. ಮಳೆ ಪ್ರಾರಂಭವಾದ ಬಳಿಕ ಯೋಜನೆ ಸಿದ್ಧಪಡಿಸಿ ಮಳೆ ಮುಗಿಯುವ ಹೊತ್ತಿಗೆ ಸರಿಪಡಿಸುವ ಕಾರ್ಯ ನಡೆಯುತ್ತದೆ. ಆದರೆ ಆ ಬಳಿಕ ಅದು ಪ್ರಯೋಜನ ಇಲ್ಲದೆ, ಮತ್ತಿನ ಮಳೆಗಾಲಕ್ಕೆ ಮಣ್ಣು ತುಂಬಿ ಮತ್ತದೇ ಗೋಳಾಗಿ ಪರಿಣಮಿಸುತ್ತಿದೆ.


ಚರಂಡಿಗಳನ್ನು ಲಕ್ಷಾಂತರ ರೂ. ವಿನಿಯೋಗಿಸಿ ಕಾಂಕ್ರೀಟಿಕರಣ ಮಾಡಲಾಗುತ್ತಿದೆಯಾದರೂ, ಅದಕ್ಕೆ ನೀರು ಹರಿಯುವ ಸ್ಥಿತಿಯಿಲ್ಲದೆ ವ್ಯರ್ಥವಾಗುತ್ತಿದೆ. ಅನಗತ್ಯಗಳಿಗೆ ಗಡಿಬಿಡಿ ಮಾಡುವ ಜನರು ಚರಂಡಿಯಲ್ಲಿರುವ ಹೂಳನ್ನು ತೆರವು ಮಾಡಿ ಎಲ್ಲೆಂದರಲ್ಲಿ ಹರಿಯುವ ನೀರನ್ನು ತಪ್ಪಿಸುವ ವಿಚಾರದಲ್ಲಿ ಮೌನವಾಗುತ್ತಿದ್ದಾರೆ. ಅಽಕಾರಿಗಳು ಎಲ್ಲ ಸರಿಪಡಿಸಲಾಗಿದೆ ಎಂಬ ಸುಳ್ಳು ವರದಿಗಳನ್ನು ಕಡತಗಳಿಗೆ ಜೋಡಿಸುತ್ತಿದ್ದಾರೆ ಹೊರತು ಜನರ ಸಮಸ್ಯೆಗೆ ಪರಿಹಾರ ಒದಗಿಸುತ್ತಿಲ್ಲ. ಇದರಿಂದ ಹೆಚ್ಚಿನ ಕಡೆ ಚರಂಡಿಯ ಕೊಚ್ಚೆ ನೀರು ರಸ್ತೆಯಲ್ಲಿ ಹರಿದು, ಜನರ ಮೇಲೆ ಎರಚುವಂತಾಗುತ್ತಿದೆ.


ರಸ್ತೆ ನೋಡಿಕೊಳ್ಳಲು ಗ್ಯಾಂಗ್‌ಮೆನ್‌ಗಳನ್ನು ಹಿಂದೆ ನೇಮಿಸಿಕೊಳ್ಳಲಾಗುತ್ತಿತ್ತು. ಆದರೆ ಸದ್ಯ ಈ ವ್ಯವಸ್ಥೆ ತೆಗೆದು ಹಾಕಿದ್ದು, ರಸ್ತೆಗಳ ಪರಿಸ್ಥಿತಿ ಶೋಚನೀಯ ಸ್ಥಿತಿಗೆ ತಲುಪುತ್ತಿದೆ. ಅಽಕಾರಿಗಳು ಕಚೇರಿಯಲ್ಲಿ ಕುಳಿತು ಮಾಡುವ ಯೋಜನೆಗಳಿಂದ ಚರಂಡಿಯ ಬದಲಾಗಿ ರಸ್ತೆಗಳಲ್ಲೇ ನೀರು ಹರಿದು ಹೋಗುತ್ತಿದೆ. ಇದರಿಂದ ಜನರು ವಾಹನಗಳ ಬದಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತಿದೆ.

  • ಪ್ರತಿ ವರ್ಷ ಅಗೆತ!: ನೀರಿನ ಹರಿವು, ಭವಿಷ್ಯದ ಚಿಂತನೆ ಇಟ್ಟುಕೊಳ್ಳದೆ ಹೊಸ ಯೋಜನೆ ರೂಪಿಸಲಾಗುತ್ತಿದೆ. ಇದರಿಂದ ಮಳೆಗಾಲದಲ್ಲಿ ಎಲ್ಲೆಂದರಲ್ಲಿ ನೀರು ನುಗ್ಗಿ ಸಮಸ್ಯೆನಿರ್ಮಾಣವಾಗುತ್ತಿದೆ. ಇದನ್ನು ಸರಿಪಡಿಸಲು ಪ್ರತಿ ವರ್ಷ ಎಲ್ಲೆಂದರಲ್ಲಿ ಅಗೆದು ಹಾಕಲಾಗುತ್ತದೆ. ಇದರ ಬದಲಾಗಿ ಕಾಮಗಾರಿ ನಡೆಸುವ ಸಂದರ್ಭದಲ್ಲೇ ಸಮರ್ಪಕವಾದ ಕ್ರಮ ತೆಗೆದುಕೊಂಡು ಸಮಸ್ಯೆಯಾದ ರೀತಿಯಲ್ಲಿ ಮಾಡಬಹುದಲ್ಲಾ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.
  • ಕಡಿಯುವುದರಲ್ಲಿ ಮಾತ್ರ ಉತ್ಸಾಹ!: ಕಾಡು ಕಡಿಮೆಯಾಗಿ ಮಳೆ ಕಡಿಮೆಯಾಗುತ್ತಿದೆ, ಈ ನಿಟ್ಟಿನಲ್ಲಿ ಗಿಡಗಳ ಸಂಖ್ಯೆ ಹೆಚ್ಚು ಮಾಡಬೇಕೆಂಬ ಅಭಿಯಾನಗಳು ನಡೆಯುತ್ತವೆ. ರಸ್ತೆ ಬದಿಯಲ್ಲಿ ಪರಿಸರ ದಿನದಂದು ನೆಟ್ಟ ಗಿಡವನ್ನು ಎರಡು ವರ್ಷದ ಬಳಿಕ ರಸ್ತೆಗೆ ಅಪಾಯಕಾರಿ ಎಂದು ಕಡಿದು ಹಾಕುವ ಕಾರ್ಯ ನಡೆಯುತ್ತಿದೆ. ಜನಪ್ರತಿನಿಽಗಳಿಗೆ ಮರಗಳನ್ನು ಕಡಿಯುವುದರಲ್ಲಿ ಇರುವ ಉತ್ಸಾಹ ರಸ್ತೆಯಲ್ಲಿ ಹರಿಯುವ ನೀರನ್ನು ಚರಂಡಿಗೆ ಕಳುಹಿಸುವುದರಲ್ಲಿ ಇಲ್ಲ.


ಪದವಿಗಳೇ ವ್ಯರ್ಥ!
ಕಬಕ ಜಂಕ್ಷನ್ ಸಮೀಪ ಕೆಲವು ವರ್ಷದ ಹಿಂದೆ ಮಾಡಲಾದ ಚರಂಡಿ ರಸ್ತೆಯಿಂದ ಎತ್ತರದಲ್ಲಿದ್ದು, ನೀರು ಹೆದ್ದಾರಿಯಲ್ಲೇ ಹರಿಯುತ್ತದೆ. ನೀರು ಹರಿದು ಹೋಗುವ ಜಾಗಗಳ ಮಾಹಿತಿಯೇ ಇಲ್ಲದವರು ಇಂದು ಕಾಮಗಾರಿಗಳನ್ನು ನಡೆಸುತ್ತಿದ್ದಾರೆ. ಭೌಗೋಳಿಕತೆಯ ಸಾಮಾನ್ಯ ಜ್ಞಾನವೂ ಇಲ್ಲದವರು ಕಚೇರಿಗಳಲ್ಲಿ ಕುಳಿತು ಯೋಜನೆ ಸಿದ್ಧಪಡಿಸುತ್ತಿರುವುದು ಇದಕ್ಕೆ ಕಾರಣ. ಅವೈಜ್ಞಾನಿಕ ಕಾಮಗಾರಿಗಳು ಹೆಚ್ಚಾಗುತ್ತಿರುವುದರಿಂದ ಸೂಟುಬೂಟು ಹಾಕಿಕೊಂಡು ಹೋಗುವ ಪದವಿಗಳೇ ವ್ಯರ್ಥ ಎಂಬ ಮಾತು ಜನಸಾಮಾನ್ಯ ಮಾತಾಡುವಂತಾಗಿದೆ.

ಹೆದ್ದಾರಿ ಬದಿ ಕೆಸರು
ಮಾಣಿ ಮೈಸೂರು ಹೆದ್ದಾರಿಯ ಬದಿಗೆ ಮಳೆಗಾಲದ ಮೊದಲು ಮಣ್ಣು ಹಾಕಿ ಸಮತಟ್ಟು ಮಾಡಲಾಗಿತ್ತು. ಆದರೆ ರಸ್ತೆಯಿಂದ ನೀರು ಚರಂಡಿಗೆ ಹರಿಯುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಿಲ್ಲ. ಈಗ ಮಳೆಯಿಂದ ಮಣ್ಣು ಕೆಸರಾಗಿ ಹೆದ್ದಾರಿಯ ಬದಿಯಲ್ಲಿ ವಾಹನ ಇಳಿಸಿದವರು ಮೇಲೆ ಬರಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದರೂ ಅಽಕಾರಿ ವರ್ಗ ಇದನ್ನು ಜಲ್ಲಿಹುಡಿ ಹಾಕಿ ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ.


ಸ್ಲಾಬ್ ತುಂಡಾದರೂ ಕ್ರಮವಿಲ್ಲ:
ಪುತ್ತೂರು ಗಾಂಽಕಟ್ಟೆಯಿಂದ ಧರ್ಬೆ ಕಡೆಗೆ ಹೋಗುವ ಮುಖ್ಯ ರಸ್ತೆಯಿಂದ ಪಾಂಗಳಾಯಿ ಕಡೆಗೆ ಹೋಗುವ ರಸ್ತೆಯ ಮುಂಭಾಗದಲ್ಲಿ ಚರಂಡಿಗೆ ಅಳವಡಿಸಿದ ಸ್ಲಾಬ್ ಮುರಿದುಹೋಗಿದ್ದು, ಕೇಳುವವರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಮೂರು ದಿನಗಳಿಂದ ಅಽಕಾರಿಗಳ ಕಣ್ಣಿಗೆ ಬೀಳದಿರುವುದು ಅಚ್ಚರಿ ಮೂಡಿಸಿದೆ. ಅಽಕಾರಿಗಳ ಗಮನಕ್ಕೆ ತಂದರೂ, ತುರ್ತು ಕ್ರಮ ಕೈಗೊಳ್ಳದೆ ಅಪಾಯವನ್ನು ಆಹ್ವಾನಿಸುವಂತಿದೆ.


ಪ್ರತಿಯೊಂದು ಪ್ರದೇಶಕ್ಕೆ ಗ್ಯಾಂಗ್‌ಮೆನ್ ನೇಮಿಸಿ ರಸ್ತೆಗಳ ಪರಿಶೀಲನೆ ಕಾರ್ಯ ನಡೆಯುತ್ತಿತ್ತು. ಇಂದು ಈ ಕೆಲಸಗಳನ್ನು ಯಾಂತ್ರಿಕೃತವಾಗಿ ಮಾಡಲಾಗುತ್ತಿದ್ದು, ಅದು ಸಮರ್ಪಕವಾಗಿ ನಡೆಯುತ್ತಿಲ್ಲ. ಸರ್ಕಾರ ಗ್ಯಾಂಗ್‌ಮೆನ್‌ಗಳ ನೇಮಕ ಮಾಡುವ ಮೂಲಕ ಹಿಂದಿನ ವ್ಯವಸ್ಥೆ ಮತ್ತೆ ಜಾರಿಗೆ ತಂದು ಸಮರ್ಪಕವಾಗಿ ಕೆಲಸ ಮಾಡುವುದರಿಂದ ಸಮಸ್ಯೆ ಕಡಿಮೆ ಮಾಡಬಹುದಾಗಿದೆ.
| ಸಂಜೀವ ಕಬಕ, ಸಾಮಾಜಿಕ ಹೋರಾಟಗಾರರು