ಮಂಡ್ಯ: ಜಿಲ್ಲೆಯಲ್ಲಿ ಡಿ.3ರಂದು ವಿಶ್ವ ಅಂಗವಿಕಲರ ದಿನವನ್ನು ವ್ಯವಸ್ಥಿತವಾಗಿ ಹಾಗೂ ಪರಿಣಾಮಕಾರಿಯಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಯಚಾಮರಾಜೇಂದ್ರ ಒಡೆಯರ್ ವೃತ್ತದ ಮಾರ್ಗವಾಗಿ ಅಂಬೇಡ್ಕರ್ ಭವನದವರೆಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಅಂಗವಿಕಲ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.
ದಿನಾಚರಣೆ ಅಂಗವಾಗಿ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ನ.22ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲ ಅಂಗವಿಕಲರು ಭಾಗವಹಿಸಬೇಕು. ವಿಜೇತರಾದವರಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ನೀಡಲಾಗುವುದು. ಇದಲ್ಲದೆ ಅಂಗವಿಕಲರಿಗೆ ಸರ್ಕಾರದಿಂದ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಲು ನ.25 ರಿಂದ ಡಿ.1ರವರೆಗೆ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗವನ್ನು ಅರ್ಹರು ಪಡೆಯಬೇಕು ಎಂದು ಸಲಹೆ ನೀಡಿದರು.
ವಿವಿಧ ಸ್ಪರ್ಧೆಗೆ ಸಂಬಂಧಿಸಿದಂತೆ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ 6 ರಿಂದ 12 ವರ್ಷ, 13 ರಿಂದ 18, 19 ರಿಂದ 35 ಒಳಪಟ್ಟ ಹಾಗೂ 36 ವರ್ಷ ಮೇಲ್ಪಟ್ಟ ಬುದ್ಧಿಮಾಂದ್ಯ ಅಂಗವಿಕಲರಿಗೆ ಚೆಂಡು ಎಸೆತ ಹಾಗೂ ಬಕೆಟ್ ಬಾಲ್, ಶ್ರವಣದೋಷವುಳ್ಳವರಿಗೆ ಗುಂಡು ಎಸೆತ ಹಾಗೂ ಲೆಮನ್ ಆ್ಯಂಡ್ ಸ್ಪೂನ್, ಅಂಧರಿಗೆ ಮಡಿಕೆ ಹೊಡೆಯುವ ಸ್ಪರ್ಧೆ ಹಾಗೂ ಚೆಂಡು ಎಸೆತ ಸ್ಪರ್ಧೆ, ದೈಹಿಕ ಅಂಗವಿಕಲರಿಗೆ ಗುಂಡು ಎಸೆತ ಹಾಗೂ ಪಾಸಿಂಗ್ ದಿ ಬಾಲ್ ಸ್ಪರ್ಧೆ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿರುವ ಅರ್ಹ ಅಂಗವಿಕಲರು ಸರ್ಕಾರದಿಂದ ದೊರೆಯುವ ಪಿಂಚಣಿ ಸೌಲಭ್ಯವು ದೊರೆಯಬೇಕು. ಅರ್ಹ ಸೌಲಭ್ಯ ವಂಚಿತರಿಂದ ಅರ್ಜಿ ಸ್ವೀಕೃತಿ ಮಾಡಿ ಅವರಿಗೆ ಸೌಲಭ್ಯಗಳನ್ನು ಕಲ್ಪಿಸಿ ಎಂದು ಸೂಚಿಸಿದರು.
ಮೈಸೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಂಗವಿಕಲರಿಗೆ ಉಚಿತ ಶಿಕ್ಷಣವನ್ನು ನೀಡುವ ಸಂಸ್ಥೆಗಳಿವೆ. ಈ ಹಿನ್ನೆಲೆಯಲ್ಲಿ ಶಿಕ್ಷಣವನ್ನು ಮುಂದುವರಿಸದೆ ಅನೇಕ ಕಾರಣದಿಂದ ಅರ್ಧಕ್ಕೆ ವಿದ್ಯಾಭ್ಯಾಸ ನಿಲ್ಲಿಸಿರುವವರು ಈ ಸಂಸ್ಥೆಗೆ ದಾಖಲಾಗಬಹುದು. ಪಿಯುಸಿ ಹಾಗೂ ಪದವಿ ಮುಗಿಸಿರುವ ಆಸಕ್ತ ಅಂಗವಿಕಲರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ವಸತಿ, ಊಟದ ಜತೆಗೆ ತರಬೇತಿ ನೀಡಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೋಮಲ್ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂ ಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಶಿಕ್ಷಣ ಇಲಾಖೆ ಚಂದ್ರಶೇಖರ್, ಅಲಿಮ್ಕೋ ಸಂಸ್ಥೆಯ ಅಧಿಕಾರಿ ಡಾ.ಎಲ್.ಸರ್ಕಾರ್ ಇತರರಿದ್ದರು.