ಜಿಲ್ಲೆ

ಸಿಹಿಮೊಗ್ಗೆ ಯಾರ ಮುಡಿಗೆ?: ಬಿಜೆಪಿಗೆ ಗಳಿಸಿದ್ದನ್ನು ಉಳಿಸಿಕೊಳ್ಳುವ ಅನಿವಾರ್ಯತೆ..

Webdesk - Ravikanth
ಮರಳಿ ಪುಟಿದು ನಿಲ್ಲುವ ತವಕದಲ್ಲಿದೆ ಕಾಂಗ್ರೆಸ್ | ಎರಡು ಕ್ಷೇತ್ರದಲ್ಲಾದರೂ ನಗೆ ಬೀರುವ ಆಸೆ ಜೆಡಿಎಸ್​ಗೆ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗಳಿಸಿದ್ದ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಬಿಜೆಪಿಗೆ. ಕಳೆದುಕೊಂಡಿದ್ದನ್ನು ಮರಳಿ ಪಡೆದು ಪುಟಿದು ನಿಲ್ಲುವ ತವಕ ಕಾಂಗ್ರೆಸ್​ಗೆ. ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ಸಾಧ್ಯತೆಯಿರುವ ಎರಡು ಕ್ಷೇತ್ರದಲ್ಲಾದರೂ ನಗೆ ಬೀರುವ ಆಸೆ ಜೆಡಿಎಸ್​ಗೆ. ಶಿವಮೊಗ್ಗ ಜಿಲ್ಲೆ ಬಿಜೆಪಿಯ ಭದ್ರಕೋಟೆ ಎನಿಸಿದರೂ ಬಾಗಿಲು ಸ್ವಲ್ಪ ಶಿಥಿಲಗೊಂಡಂತೆ ಕಾಣಿಸುತ್ತಿದೆ. ಜಿಲ್ಲೆಯ ಎಲ್ಲೆಡೆ ಖಾತೆ ತೆರೆಯುವ ಕನಸು ಈ ಬಾರಿಯೂ ಕಷ್ಟ. ಎರಡು ಕ್ಷೇತ್ರಗಳಲ್ಲಿ ಮುಖಂಡರ ನಡುವೆ ಉಂಟಾಗಿರುವ ಮನಸ್ತಾಪ ನಾಯಕರಿಗೆ ಬಿಸಿತುಪ್ಪ. ಕಳೆದ ಚುನಾವಣೆಯಲ್ಲಿ ಮೋದಿ ಫ್ಯಾಕ್ಟರ್​ನಿಂದ ಭರ್ಜರಿ ಲೀಡ್​ನಲ್ಲಿ ಗೆದ್ದಿದ್ದ ಬಿಜೆಪಿ ಶಾಸಕರು, ಈ ಬಾರಿ ಸಿಕ್ಕಾಪಟ್ಟೆ ಬೆವರು ಹರಿಸಬೇಕು. ಕಾಂಗ್ರೆಸ್ ಸ್ಥಿತಿಯೂ ಭಿನ್ನವಾಗಿಲ್ಲ. ಐದು ವರ್ಷ ಜಿಪಂನಲ್ಲಿ ಜೆಡಿಎಸ್​ನೊಂದಿಗೆ ಅಧಿಕಾರ ಹಂಚಿಕೆ ಮಾಡಿಕೊಂಡಿದ್ದು, ಒಂದು ಲೋಕಸಭೆ ಉಪಚುನಾವಣೆ ಹಾಗೂ ಎರಡು ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್​ನೊಂದಿಗೆ ಮಾಡಿಕೊಂಡ ಮೈತ್ರಿಯಿಂದ ಬಸವಳಿದಿದೆ. ತೀರ್ಥಹಳ್ಳಿಯಲ್ಲಿ ಇಬ್ಬರು ಟಿಕೆಟ್ ಆಕಾಂಕ್ಷಿಗಳ ನಡುವೆ ನಡೆಯುತ್ತಿರುವ ಸಂಘರ್ಷ ಪಕ್ಷಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಪರೂಪಕ್ಕೆ ಭರ್ಜರಿ ಪ್ರದರ್ಶನ ನೀಡುವ ಜೆಡಿಎಸ್ ಈಗ ಎರಡು ಕ್ಷೇತ್ರಕ್ಕಷ್ಟೇ ಪೈಪೋಟಿ ನೀಡಲು ಶಕ್ತವಾಗಿದೆ. ಆಮ್ ಆದ್ಮಿ ಪಾರ್ಟಿ ಸದ್ದು ಮಾಡುತ್ತಿದ್ದರೂ ಚುನಾವಣೆಯಲ್ಲಿ ಗಮನಾರ್ಹ ಪ್ರದರ್ಶನ ಕಷ್ಟ.

| ಅರವಿಂದ ಅಕ್ಲಾಪುರ ಶಿವಮೊಗ್ಗ

ಶಾರದಾ ಅಪ್ಪಾಜಿ ಸಂಗಮೇಶ್ವರ್ ಕದನ

ಎಂ.ಜೆ.ಅಪ್ಪಾಜಿ ನಿಧನದ ಬಳಿಕ ಭದ್ರಾವತಿ ರಾಜಕೀಯ ಕಣ ಬದಲಾಗಿದೆ. ಜೆಡಿಎಸ್ ಪ್ರಾಬಲ್ಯ ಕುಸಿದಂತೆ ಕಾಣುತ್ತಿದೆ. ಅಲ್ಲಿದ್ದ ಅನೇಕರು ಬಿಜೆಪಿಗೆ ಸೇರಿದ್ದಾರೆ. ಅಪ್ಪಾಜಿ ಪತ್ನಿ ಶಾರದಮ್ಮ ಜೆಡಿಎಸ್​ನಿಂದ ಕಣಕ್ಕಿಳಿಯುವುದು ನಿಶ್ಚಿತ. ಅವರಿಗೆ ಅನುಕಂಪದ ಅಲೆ ವರವಾಗುವುದೇ ಎಂದು ಈಗಲೇ ಹೇಳುವುದು ಕಷ್ಟ. ಶಾಸಕ ಬಿ.ಕೆ.ಸಂಗಮೇಶ್ವರ್ ಕೈ ಮೇಲಾಗಿರುವುದು ಸ್ಪಷ್ಟ. ಮೊದಲ ಬಾರಿಗೆ ಭದ್ರಾವತಿಯಲ್ಲಿ ಕಮಲ ಅರಳಿಸಬೇಕೆಂಬ ಬಿಜೆಪಿ ಇನ್ನೂ ಟೇಕಾಫ್ ಆದಂತೆ ಕಾಣುತ್ತಿಲ್ಲ. ಇಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆಯೇ ನೇರ ಫೈಟ್.

ಗ್ರಾಮಾಂತರದಲ್ಲಿ ಬದಲಾವಣೆ ಮಾತು

ಶಿವಮೊಗ್ಗ ಗ್ರಾಮಾಂತರದಲ್ಲಿ ಶಾಸಕ ಕೆ.ಬಿ.ಅಶೋಕ ನಾಯ್್ಕ ಬಗ್ಗೆ ಒಲವು ಕಡಿಮೆಯಾಗುತ್ತಿದೆ. ಆದರೆ ಬಿಜೆಪಿಯಿಂದ ಇವರಿಗೆ ಮತ್ತೊಮ್ಮೆ ಸ್ಪರ್ಧೆಗೆ ಅವಕಾಶ ಸಿಗುವ ಸಾಧ್ಯತೆಗಳಿವೆ. ಇವರಿಗೆ ಹೋಲಿಸಿದರೆ ಮಾಜಿ ಶಾಸಕಿ ಜೆಡಿಎಸ್​ನ ಶಾರದಾ ಪೂರ್ಯಾನಾಯ್್ಕ ಓಕೆ ಎಂಬ ಅಭಿಪ್ರಾಯ ಜನರಲ್ಲಿದೆ. ಹೀಗಾಗಿ ಬಿಜೆಪಿಗೆ ಈ ಕ್ಷೇತ್ರ ಅಷ್ಟು ಸಲೀಸಲ್ಲ. ಕರಿಯಣ್ಣ ಬಳಿಕ ಕ್ಷೇತ್ರವನ್ನು ಕಳೆದುಕೊಂಡಿರುವ ಕಾಂಗ್ರೆಸ್​ಗೆ ಇದು ಪ್ರತಿಷ್ಠೆಯ ಚುನಾವಣೆ. ಆದರೆ ಅಭ್ಯರ್ಥಿ ಆಯ್ಕೆಯೇ ಕಗ್ಗಂಟು. ಕಳೆದ ಬಾರಿ ಸೋತಿರುವ ಡಾ.ಶ್ರೀನಿವಾಸ್ ಕರಿಯಣ್ಣ ಇನ್ನೊಂದು ಅವಕಾಶ ಕೇಳುತ್ತಿದ್ದಾರೆ. ಪರಿಶಿಷ್ಟ ವಿಭಾಗದ ಜಿಲ್ಲಾಧ್ಯಕ್ಷೆ ಜಿ.ಪಲ್ಲವಿ, ಭೋವಿ ಸಮಾಜದ ಮುಖಂಡ ಎಸ್.ರವಿಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ಬಲದೇವ ಕೃಷ್ಣ ನಡುವೆ ಟಿಕೆಟ್​ಗೆ ಪೈಪೋಟಿಯಿದೆ.

ಹೊಸ ಮುಖಗಳ ದರ್ಶನವೇ?

ಕಳೆದೊಂದು ವರ್ಷದಿಂದ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿರುವ ಪ್ರಶ್ನೆ ಶಿಕಾರಿಪುರದಲ್ಲಿ ಹೊಸ ಮುಖ ಬರುತ್ತಾ ಎಂಬುದು. 75 ವಯೋಮಿತಿ ದಾಟಿದವರಿಗೆ ಬಿಜೆಪಿಯಲ್ಲಿ ಟಿಕೆಟ್ ನೀಡಲ್ಲ ಎಂಬ ನಂಬಿಕೆ ಸಾರ್ವತ್ರಿಕವಾಗುತ್ತಿರುವ ಕಾಲಘಟ್ಟದಲ್ಲಿ ಈ ಪ್ರಶ್ನೆ ಪ್ರಸ್ತುತವೇ. ಬರಲಿರುವ ಚುನಾವಣೆಯಲ್ಲಿ ಕಣಕ್ಕಿಳಿಯಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಘೊಷಿಸಿದ್ದಾರೆ. ಕೆ.ಎಸ್.ಈಶ್ವರಪ್ಪ ಅವರಿಗೂ ವಯಸ್ಸಿನ ಆಧಾರದಲ್ಲಿ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕಷ್ಟ ಎಂಬ ಮಾತು ಕೇಳಿ ಬರುತ್ತಿವೆ. ಯಡಿಯೂರಪ್ಪ ಅವರು ಶಿಕಾರಿಪುರದಿಂದ ವಿಜಯೇಂದ್ರನ ಹೆಸರು ಘೊಷಣೆ ಮಾಡಿದ್ದಾರೆ. ಆದರೆ ಈಶ್ವರಪ್ಪ ಅವರು ಇದುವರೆಗೆ ಪುತ್ರ ಕಾಂತೇಶ್ ಹೆಸರನ್ನು ಎಲ್ಲೂ ಬಹಿರಂಗವಾಗಿ ಪ್ರಸ್ತಾಪಿಸಿಲ್ಲ. ಕಾಂಗ್ರೆಸ್​ನಲ್ಲಿ ಕಾಗೋಡು ತಿಮ್ಮಪ್ಪ ಅವರಿಗೂ ಟಿಕೆಟ್ ಕಷ್ಟ ಎಂಬ ಮಾತುಗಳಿವೆ. ಹೀಗಾಗಿ ಹಳಬರಿಗೆ ಟಿಕೆಟ್ ಸಿಗುತ್ತಾ? ಹೊಸ ಮುಖ ಬರುತ್ತಾ ಎಂಬ ಚರ್ಚೆ ನಡೆಯುತ್ತಲೇ ಇದೆ.

ಬಿಎಸ್​ವೈ ತವರಲ್ಲಿ ಶಿಕಾರಿ

ಬಿ.ಎಸ್.ಯಡಿಯೂರಪ್ಪ ತವರು ಕ್ಷೇತ್ರ ಶಿಕಾರಿಪುರದಲ್ಲಿ ಮತ್ತೆ ಬಿಎಸ್​ವೈ ಕಣಕ್ಕಿಳಿಯುತ್ತಾರೋ? ಅವರ ಪುತ್ರ ಬಿ.ವೈ.ವಿಜಯೇಂದ್ರ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಪಡೆಯುತ್ತಾರೋ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕಾಂಗ್ರೆಸ್​ನಿಂದ ಮತ್ತೊಮ್ಮೆ ಗೋಣಿ ಮಾಲತೇಶ, ಜೆಡಿಎಸ್​ನಿಂದ ಎಚ್.ಟಿ.ಬಳಿಗಾರ್ ಅದೃಷ್ಟ ಪರೀಕ್ಷೆಗೆ ಮುಂದಾಗುವುದು ನಿಶ್ಚಿತ. ಈಗಲೂ ಕ್ಷೇತ್ರದಲ್ಲಿ ಬಿಎಸ್​ವೈ ಹಾಗೂ ಅವರ ಕುಟುಂಬ ವರ್ಚಸ್ಸು ಹೊಂದಿರುವುದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಶ್ರಮ ವ್ಯರ್ಥ ಪ್ರಯತ್ನ.

ಸೊರಬದಲ್ಲಿ ಸಹೋದರರ ಸವಾಲ್

ಸೊರಬದಲ್ಲಿ ಕುಮಾರ್-ಮಧು ಬಂಗಾರಪ್ಪ ಸಹೋದರರ ಸವಾಲ್ ಈ ಬಾರಿಯೂ ಮುಂದುವರಿಯಲಿದೆ. ಕಳೆದ ಬಾರಿ ಜೆಡಿಎಸ್​ನಿಂದ ಸ್ಪರ್ಧಿಸಿ ಸೋತಿದ್ದ ಮಧು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗುವುದು ನಿಶ್ಚಿತ. ಬಿಜೆಪಿಯಿಂದ ಕುಮಾರ್​ಗೆ ಟಿಕೆಟ್ ಖಚಿತ. ಇಲ್ಲಿ ಮೂಲ ಬಿಜೆಪಿ ಹಾಗೂ ಕುಮಾರ್ ಬಣದ ನಡುವೆ ಉಂಟಾಗಿರುವ ಮನಸ್ತಾಪ ಸದ್ಯಕ್ಕೆ ಬಿಜೆಪಿಗೆ ಸವಾಲಾಗಿದೆ. ಇದಕ್ಕೆ ಮದ್ದು ಅರೆಯುವ ಕೆಲಸ ಪಕ್ಷದೊಳಗೆ ಆರಂಭವಾಗಿದೆ. ಈ ಕ್ಷೇತ್ರ ಸತತ ಐದನೇ ಚುನಾವಣೆಯಲ್ಲಿ ಸಹೋದರರ ಸವಾಲ್​ಗೆ ಸಾಕ್ಷಿಯಾಗಲಿದೆ. ಕಾಂಗ್ರೆಸ್​ನಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಆದರೆ ಮಧು ಅವರನ್ನು ಓವರ್​ಟೇಕ್ ಮಾಡಿ ಟಿಕೆಟ್ ಪಡೆಯುವ ಸಾಧ್ಯತೆ ತುಂಬಾ ಕ್ಷೀಣ. ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಜೆಡಿಎಸ್​ಗೆ ಒಬ್ಬರು ಅಭ್ಯರ್ಥಿ ಸಿಕ್ಕಂತಾಗಲಿದೆ.

ಮಾವ-ಅಳಿಯ ಮಾಜಿ ಗೆಳೆಯ

ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್​ನಲ್ಲಿ ಮಾವ ಕಾಗೋಡು ತಿಮ್ಮಪ್ಪ ಚುನಾವಣೆಯಿಂದ ಹಿಂದೆ ಸರಿದರೆ ಅವರ ಅಳಿಯ ಬೇಳೂರು ಗೋಪಾಲಕೃಷ್ಣ ಟಿಕೆಟ್​ಗೆ ಪ್ರಯತ್ನಿಸುವುದು ಸಹಜ. ಪುತ್ರಿ ರಾಜನಂದಿನಿಗೆ ಟಿಕೆಟ್ ನೀಡಬೇಕೆಂದು ಕಾಗೋಡು ಪಟ್ಟು ಹಿಡಿದರೆ ಬೇಳೂರು ರಾಜಕೀಯ ರಿವರ್ಸ್ ಗೇರ್​ಗೆ ಮರಳುತ್ತದೆ. ಬೇಳೂರು ಮಾಜಿ ಗೆಳೆಯ ಹರತಾಳು ಹಾಲಪ್ಪ ಇನ್ನೊಮ್ಮೆ ಬಿಜೆಪಿ ಟಿಕೆಟ್ ಪಡೆಯುವುದು ನಿಶ್ಚಿತ. ಎಂಡಿಎಫ್ ಗದ್ದಲ ಹರತಾಳು ಹಾಲಪ್ಪ ಹಾಗೂ ಬಿಜೆಪಿಗೆ ಕಿರಿಕಿರಿ ಉಂಟು ಮಾಡಿದೆ. ಇದನ್ನು ಬೇಗ ಪರಿಹರಿಸಿಕೊಳ್ಳಲು ಬಿಜೆಪಿ ಸೂತ್ರ ಸಿದ್ಧಪಡಿಸುತ್ತಿದೆ.

ಶಿವಮೊಗ್ಗದಲ್ಲಿ ಟಿಕೆಟ್ ಸಸ್ಪೆನ್ಸ್

ಬೆಳಗಾವಿ ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ ಚುನಾವಣೆ ವೇಳೆಗೆ ಇತ್ಯರ್ಥವಾಗದಿದ್ದರೆ ಕೆ.ಎಸ್.ಈಶ್ವರಪ್ಪಗೆ ಟಿಕೆಟ್ ಸಿಗುವುದೇ ಎಂಬ ಪ್ರಶ್ನೆ ಸಹಜವಾಗಿತ್ತು. ಈಗ ಕ್ಲೀನ್ ಚಿಟ್ ಸಿಕ್ಕರೂ ವಯೋಮಿತಿಯ ಮತ್ತೊಂದು ಪ್ರಶ್ನೆ ಇದೆ. ಒಂದು ವೇಳೆ ವಯಸ್ಸಿನ ಆಧಾರದಲ್ಲಿ ಟಿಕೆಟ್ ನಿರಾಕರಿಸಿದರೆ ಪುತ್ರ, ಜಿಪಂ ಮಾಜಿ ಸದಸ್ಯ ಕೆ.ಇ. ಕಾಂತೇಶ್​ಗೆ ಟಿಕೆಟ್​ಗೆ ಬೇಡಿಕೆ ಇಡಬಹುದು. ಶಿಕಾರಿಪುರದಲ್ಲಿ ವಿಜಯೇಂದ್ರ ಅವರಿಗೆ ಪಕ್ಷ ಟಿಕೆಟ್ ನೀಡಿದರೆ ಈಶ್ವರಪ್ಪ ಇದೇ ಮಾನದಂಡದಲ್ಲಿ ಹಕ್ಕು ಪ್ರತಿಪಾದನೆ ಮಾಡುವುದರಲ್ಲಿ ಸಂದೇಹವಿಲ್ಲ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅಂತಿಮ ಬಾರಿ ಟಿಕೆಟ್​ಗೆ ಪ್ರಯತ್ನ ನಡೆಸುವುದು ನಿಶ್ಚಿತ. ನಗರಪಾಲಿಕೆ ಸದಸ್ಯ ಎಚ್.ಸಿ.ಯೋಗೇಶ್ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಕಣಕ್ಕಿಳಿಯುವುದು ನಿಶ್ಚಿತ. ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಎನಿಸಿದರೂ ಬಿಜೆಪಿ-ಕಾಂಗ್ರೆಸ್ ನಡುವೆಯೇ ಹಣಾಹಣಿ. ಎರಡೂ ಪಕ್ಷದಲ್ಲಿ ಅಭ್ಯರ್ಥಿ ಯಾರು ಎಂಬುದು ಸದ್ಯಕ್ಕೆ ಸಸ್ಪೆನ್ಸ್.

ತೀರ್ಥಹಳ್ಳಿಯಲ್ಲಿ ಹಾಲಿ-ಮಾಜಿ ಕಾದಾಟ

ತೀರ್ಥಹಳ್ಳಿ ಕ್ಷೇತ್ರ ಮತ್ತೊಮ್ಮೆ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ಕಾದಾಟಕ್ಕೆ ಸಾಕ್ಷಿಯಾಗಲಿದೆ. ಆರ್.ಎಂ.ಮಂಜುನಾಥ ಗೌಡ ಕಾಂಗ್ರೆಸ್ ಟಿಕೆಟ್​ನ ಪ್ರಬಲ ಆಕಾಂಕ್ಷಿಯಾಗಿದ್ದರೂ ಹಿಂದಿನ ಚುನಾವಣೆ ಸಂದರ್ಭದಲ್ಲಿ ಅವರು ಪಕ್ಷ ತೊರೆದಿದ್ದೇ ಮುಳುವಾಗಲಿದೆ. ಆರ್.ಮದನ್, ಆರ್.ಎಂ.ಮಂಜುನಾಥ ಗೌಡರು ಪಕ್ಷ ತೊರೆದಿದ್ದರಿಂದ ಜೆಡಿಎಸ್ ಸಂಘಟನೆ 18 ವರ್ಷ ಹಿಂದಕ್ಕೆ ಹೋದಂತಾಗಿದೆ. ಕಳೆದ ಚುನಾವಣೆಯಲ್ಲಿ ಕಿಮ್ಮನೆ ಸೋಲಿಗೆ ಕಾರಣವಾಗಿದ್ದು ಆರ್​ಎಂಎಂ ರಾಜಕೀಯ ನಡೆ. ಈಗಲೂ ಅವರಿಬ್ಬರ ನಡುವಿನ ಮನಸ್ತಾಪ ಕಡಿಮೆಯಾಗಿಲ್ಲ. ಇದು ಬಿಜೆಪಿಗೆ ವರದಾನ. ಕಾಂಗ್ರೆಸ್​ನ ಗುಂಪುಗಾರಿಕೆ ದೂರಾದರೆ ಮಾತ್ರ ಇಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ಖಡಕ್ ಫೈಟ್ ನಿರೀಕ್ಷಿಸಬಹುದು.

ಪಕ್ಷಗಳ ಸ್ಟ್ರ್ಯಾಟಜಿ

  • ಏರ್​ಪೋರ್ಟ್, ರೈಲ್ವೆ, ಹೈವೆ ಬಿಜೆಪಿಗೆ ವರ
  • ಅಭಿವೃದ್ಧಿ ಅಜೆಂಡಾವೇ ಬಿಜೆಪಿ ಪ್ರಚಾರ ಅಸ್ತ್ರ
  • ಬೆಲೆ ಏರಿಕೆ, ಭ್ರಷ್ಟಾಚಾರ ಆರೋಪ ಕಾಂಗ್ರೆಸ್​ಗೆ ವರದಾನ
  • ಆಡಳಿತ ವಿರೋಧಿ ಅಲೆ ಬಳಕೆಗೆ ಕಾಂಗ್ರೆಸ್ ಯತ್ನ