ರಾಜ್ಯದ ನಕ್ಷೆಯಲ್ಲಿ ನಾಲ್ಕು ತಾಲೂಕುಗಳ ಚಿಕ್ಕ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ರೇಷ್ಮೆನಾಡು ರಾಮನಗರ, ರಾಜಕೀಯ ಕ್ಷೇತ್ರದಲ್ಲಿ ಘಟಾನುಘಟಿ ನಾಯಕರನ್ನು ಹೊಂದಿದೆ. ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿಯವರೆಗೂ ಜಿಲ್ಲೆ ಹಲವು ಮಹನೀಯ ನಾಯಕರನ್ನು ರಾಜಕಾರಣಕ್ಕೆ ಕೊಡುಗೆಯಾಗಿ ನೀಡಿದೆ. ರಾಜ್ಯದ ಮೊದಲ ವಿದ್ಯಾಮಂತ್ರಿಯಾದ ವಿ. ವೆಂಕಟಪ್ಪ, ವಿಧಾನಸೌಧದ ನಿರ್ವತೃ ಕೆಂಗಲ್ ಹನುಮಂತಯ್ಯ ಸೇರಿ ಇನ್ನೂ ಹಲವರು ಇದೇ ಜಿಲ್ಲೆಯವರು. ರಾಜ್ಯಕ್ಕೆ ಅತಿ ಹೆಚ್ಚು ಮುಖ್ಯಮಂತ್ರಿಗಳನ್ನು ಕೊಟ್ಟ ಹೆಗ್ಗಳಿಕೆಯೂ ಜಿಲ್ಲೆಗಿದೆ. ಕೆಂಗಲ್ ಹನುಮಂತಯ್ಯ ರಾಮನಗರದಿಂದ ಆಯ್ಕೆಯಾದರೆ, ಮುಖ್ಯಮಂತ್ರಿ ಆಗಿಯೇ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಮಕೃಷ್ಣ ಹೆಗಡೆ ಅವರನ್ನು ಇಲ್ಲಿನ ಮತದಾರರು ಗೆಲ್ಲಿಸಿದ್ದರು. ನಂತರ 1994ರಲ್ಲಿ ಎಚ್.ಡಿ. ದೇವೇಗೌಡರಿಗೆ ರಾಮನಗರ ಕ್ಷೇತ್ರ ರಾಜಕೀಯ ಪುನರ್ಜನ್ಮ ನೀಡಿದ್ದು ಮಾತ್ರವಲ್ಲದೆ, ಅವರನ್ನು ಸಿಎಂ ಗಾದಿ ಏರುವಂತೆ ಮಾಡಿತು. ನಂತರ ಅವರು ಪ್ರಧಾನಿಯೂ ಆದರು. ಇದಾದ ನಂತರ ರಾಮನಗರದಿಂದ ಒಮ್ಮೆ ಮತ್ತು ಚನ್ನಪಟ್ಟಣದಿಂದ ಒಮ್ಮೆ ಗೆಲುವು ಸಾಧಿಸಿದ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸಿದ್ದಾರೆ. ಮುಂಬರುವ 2023ರ ಚುನಾವಣೆ ನಂತರ ಸಿಎಂ ರೇಸ್ನಲ್ಲಿರುವ ಪ್ರಮುಖರಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ಇರುವುದು ಕದನ ಕಣ ರಂಗೇರುವಂತೆ ಮಾಡಿದೆ.
| ಗಂಗಾಧರ್ ಬೈರಾಪಟ್ಟಣ ರಾಮನಗರ
ಮಾಗಡಿಯಲ್ಲಿ ಜಟ್ಟಿಗಳ ಕಾಳಗ
ಕೆಂಪೇಗೌಡರ ನಾಡು ಮಾಗಡಿಯಲ್ಲಿ ಚುನಾವಣೆ ಸಿದ್ಧತೆ ಭರ್ಜರಿಯಾಗಿಯೇ ನಡೆದಿವೆ. ಹಾಲಿ ಶಾಸಕ ಜೆಡಿಎಸ್ನ ಎ. ಮಂಜುನಾಥ್ ಸ್ಪರ್ಧೆ ಖಚಿತ. ಎದುರಾಳಿಯಾಗಿ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಕಾಂಗ್ರೆಸ್ನ ಹುರಿಯಾಳು. ಇವರ ನಡುವೆ ಬಿಗ್ ಫೈಟ್ ಈಗಾಗಲೆ ಆರಂಭಗೊಂಡಿದೆ. ಕಳೆದ ಚುನಾವಣೆಯಲ್ಲಿ ಮಂಜುನಾಥ್ ವಿರುದ್ಧ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದ ಸೋಲು ಕಂಡಿದ್ದ ಬಾಲಕೃಷ್ಣ ಈ ಬಾರಿ ಪ್ರತೀಕಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜಾತಿ ಬಲ ಮತ್ತು ಪಕ್ಷದ ಕಾರ್ಯಕರ್ತರ ಬಲ ಇರುವವರೆಗೂ ತಮ್ಮನ್ನೇನೂ ಮಾಡಲು ಸಾಧ್ಯವಿಲ್ಲ ಎನ್ನುವ ವಿಶ್ವಾಸದಲ್ಲಿರುವ ಎ. ಮಂಜುನಾಥ್ ಗೆಲುವು ನನ್ನದೇ ಎನ್ನುತ್ತಿದ್ದಾರೆ. ಸಂಘಟನೆ ಮಾಡಿದರೆ ಗೆಲ್ಲುವ ಸಾಮರ್ಥ್ಯ ಬಿಜೆಪಿಗೂ ಇದೆ. ಆದರೆ, ತವರು ನೆಲವಾದರೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅಭಿವೃದ್ಧಿ ವಿಚಾರದಲ್ಲಿ ಒಂದಿಷ್ಟು ಓಡಾಟ ಮಾಡಿದ್ದು ಬಿಟ್ಟರೆ ಪಕ್ಷ ಸಂಘಟನೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಂಡಿಲ್ಲ. ಬಿಜೆಪಿಯಿಂದ ಸ್ಪರ್ಧೆ ಮಾಡುವ ತವಕದಲ್ಲಿ ಪ್ರಸಾದ್ಗೌಡ ಮತ್ತು ರಂಗಧಾಮಯ್ಯ ಕೆಲಸ ಮಾಡುತ್ತಿದ್ದಾರೆ.
ಬೊಂಬೆ ಆಡ್ಸೋರು ಯಾರು?
ಬೊಂಬೆನಾಡು ಚನ್ನಪಟ್ಟಣದಲ್ಲಿ ಜೆಡಿಎಸ್-ಬಿಜೆಪಿ ನಡುವೆ ಫೈಟ್. ಮತ್ತೊಮ್ಮೆ ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿರುವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಟಫ್ ಫೈಟರ್ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್. ಈಗಾಗಲೆ ಇಬ್ಬರೂ ನಾಯಕರು ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ. ಇಬ್ಬರಿಗೂ ತಮ್ಮದೇ ಆದ ನಿರ್ದಿಷ್ಟ ಮತ ಬ್ಯಾಂಕ್ ಇದೆ. ಇದರ ಹೊರತಾಗಿ ಗೆಲುವಿಗೆ ಬೇಕಾದ ಮತಗಳನ್ನು ಸೆಳೆಯುವ ಕಸರತ್ತು ಆರಂಭಗೊಂಡಿದೆ. ಪ್ರಸ್ತುತ ಸನ್ನಿವೇಶವನ್ನು ಅವಲೋಕಿಸಿದಾಗ ಎಚ್.ಡಿ. ಕುಮಾರಸ್ವಾಮಿ ಮತ್ತು ಯೋಗೇಶ್ವರ್ ಇಬ್ಬರಿಗೂ ಮುಂದಿನ ಚುನಾವಣೆ ಅಷ್ಟು ಸುಲಭವಲ್ಲ. ಕಾಂಗ್ರೆಸ್ನಿಂದ ಉದ್ಯಮಿ ಹಾಗೂ ಹೊಸ ಮುಖ ಪ್ರಸನ್ನಗೌಡ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಇವರೇ ಅಭ್ಯರ್ಥಿ ಎನ್ನಲಾಗುತ್ತಿದೆ. ಇವರು ಎಷ್ಟು ಮತ ಸೆಳೆಯುತ್ತಾರೆ ಎನ್ನುವುದೂ ಒಟ್ಟಾರೆ ಫಲಿತಾಂಶಕ್ಕೆ ನಿರ್ಣಾಯಕವಾಗಲಿದೆ.
ಜೆಡಿಎಸ್ಗೆ ಫೇವರ್ ಆದರೂ...
ರಾಮನಗರ ಜೆಡಿಎಸ್ ಪಾಲಿನ ಭದ್ರಕೋಟೆ. 2004ರ ನಂತರ ಪಕ್ಷದಿಂದ ಯಾರೇ ನಿಂತರೂ ಗೆಲುವು ನಿಶ್ಚಿತ ಎನ್ನುವ ಮಾತು ಜನಜನಿತ. ಇದು 2018 ಮತ್ತು ನಂತರ ನಡೆದ ಉಪಚುನಾವಣೆಯಲ್ಲೂ ಸಾಬೀತಾಗಿದೆ. ಆದರೆ, ಈ ಬಾರಿ ಇಲ್ಲಿನ ಪರಿಸ್ಥಿತಿ ಭಿನ್ನವಾಗಿದೆ. ಕಾಂಗ್ರೆಸ್ನಿಂದ ಡಿ.ಕೆ.ಶಿವಕುಮಾರ್ ಕುಟುಂಬದ ಯಾರೇ ಸ್ಪರ್ಧಿಸಿದರೂ ಜೆಡಿಎಸ್ ಕೊಂಚ ಶ್ರಮ ಹಾಕಬೇಕಾದ ಅನಿವಾರ್ಯತೆ ಇದೆ. ಸದ್ಯಕ್ಕೆ ಹಾಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರೇ ಮುಂದಿನ ಚುನಾವಣೆಗೂ ಜೆಡಿಎಸ್ ಅಭ್ಯರ್ಥಿ ಎನ್ನಲಾಗುತ್ತಿದೆ. ಒಂದಿಷ್ಟು ದಿನ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತಾದ್ದರೂ, ಕಳೆದ ಏಪ್ರಿಲ್ನಿಂದ ನಿಖಿಲ್ ಕ್ಷೇತ್ರದಿಂದ ನಾಪತ್ತೆ ಆಗಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ಗೆ ಪ್ರಬಲ ಸ್ಪರ್ಧೆ ನೀಡಿದ್ದ ಕಾಂಗ್ರೆಸ್ನ ಇಕ್ಬಾಲ್ ಹುಸೇನ್ ಈ ಬಾರಿಯೂ ಅಷ್ಟೇ ಹುಮ್ಮಸ್ಸಿನಿಂದ ಓಡಾಡುತ್ತಿದ್ದಾರೆ. ಇವರ ಸ್ಪರ್ಧೆಗೆ ಸ್ಥಳೀಯವಾಗಿ ಕೆಲವರ ವಿರೋಧವಿದೆ. ಜೆಡಿಎಸ್ ಸೋಲಿಸಲು ಡಿಕೆಶಿ ಕುಟುಂಬದವರೇ ಸ್ಪರ್ಧಿಸಬೇಕು ಎನ್ನುವ ಕೂಗು ಎದ್ದಿದೆ. ಇದರಿಂದಾಗಿ ಅಂತಿಮ ಹಂತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆದರೂ ಅಚ್ಚರಿ ಏನಿಲ್ಲ. ಇನ್ನು ಬಿಜೆಪಿ ನಾಮ್ ಕೇ ವಾಸ್ತೆ ಎನ್ನುವಂತಿದ್ದರೂ ಸ್ಪರ್ಧಿಸುವ ಹುಮ್ಮಸ್ಸಿನಲ್ಲಿರುವ ಯುವ ಮುಖಂಡರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಲ್ಲಿ ಹಾರೋಹಳ್ಳಿಯ ಗೌತಮ್ೌಡ, ರಾಮನಗರದ ವರದರಾಜಗೌಡ, ಡಿ.ನರೇಂದ್ರ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದಾರೆ.
ಗೆಲ್ಲುವ ಟಾಸ್ಕ್: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಇಬ್ಬರೂ 2023ರ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿ ಸ್ಥಾನ ಅಲಂಕರಿಸಬೇಕು ಎನ್ನುವ ಹೋರಾಟದಲ್ಲಿ ಇದ್ದಾರೆ. ಆದರೆ ಇವರ ಸಿಎಂ ಗಾದಿಗೆ ಜಿಲ್ಲೆಯಲ್ಲಿ ಪಕ್ಷದ ಎಷ್ಟು ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎನ್ನುವ ಮಾನದಂಡ ಕೆಲಸ ಮಾಡಲಿದೆ. ಡಿ.ಕೆ.ಶಿವಕುಮಾರ್ ರಾಮನಗರ, ಮಾಗಡಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಇಲ್ಲಿ ಗೆಲ್ಲಲೇಬೇಕು ಎನ್ನುವ ಕನಸು ಕಂಡಿದ್ದಾರೆ. ಮತ್ತೊಂದೆಡೆ ಕುಮಾರಸ್ವಾಮಿ ಅವರೂ ಈಗಿರುವ ಮೂರು ಕ್ಷೇತ್ರಗಳನ್ನು ಉಳಿಸಿಕೊಳ್ಳಲೇಬೇಕು ಎನ್ನುವ ಪ್ರಯತ್ನದಲ್ಲಿದ್ದಾರೆ.
ಬಲಾಬಲ: ಜಿಲ್ಲೆಯಲ್ಲಿ ರಾಮನಗರ, ಮಾಗಡಿ, ಚನ್ನಪಟ್ಟಣ ಮತ್ತು ಕನಕಪುರ ಕ್ಷೇತ್ರಗಳಿದ್ದು, ಮೊದಲ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿದ್ದರೆ ಕನಕಪುರದಲ್ಲಿ ಕಾಂಗ್ರೆಸ್ ತಳ ಊರಿದೆ.
ಬಂಡೆ ಜಗ್ಗಿಸೋರು ಇಲ್ಲ
ಮುಖ್ಯಮಂತ್ರಿ ಆಗಲೇಬೇಕು ಎನ್ನುವ ಸರ್ವ ಪ್ರಯತ್ನ ಮಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಕನಕಪುರ ಕ್ಷೇತ್ರದಲ್ಲಿ ಅಲುಗಾಡಿಸುವವರೇ ಇಲ್ಲ. ಜೆಡಿಎಸ್ ಪಾಲಿಗೆ ಬೆಳೆಯುವ ಶಕ್ತಿ ಇದ್ದರೂ, ಎಚ್.ಡಿ. ದೇವೇಗೌಡರ ಕುಟುಂಬದ ನಿರಾಸಕ್ತಿ ಫಲವಾಗಿ ಕ್ಷೇತ್ರದಲ್ಲಿ ಪಕ್ಷ ನೆಲಕಚ್ಚಿದೆ. ಡಿ.ಕೆ.ಶಿವಕುಮಾರ್ ವಿರುದ್ಧ ಗಟ್ಟಿಯಾಗಿ ಹೋರಾಟ ಮಾಡುತ್ತಿದ್ದ ದುಂತೂರು ವಿಶ್ವನಾಥ್ ಈಗ ಪಕ್ಷದಿಂದ ದೂರವೇ ಉಳಿದಿದ್ದಾರೆ. ಇದರಿಂದಾಗಿ ಜೆಡಿಎಸ್ ಲೆಕ್ಕದಲ್ಲಿ ಇದ್ದರೂ ಆಟಕ್ಕೆ ಬರುವುದು ಅನುಮಾನ ಎನ್ನುವಂತೆ ಆಗಿದೆ. ಸತತ 7 ಬಾರಿ ಗೆಲುವು ಸಾಧಿಸಿರುವ ಡಿ.ಕೆ.ಶಿವಕುಮಾರ್ ಅವರನ್ನು ಈ ಬಾರಿಯೂ ಕಟ್ಟಿ ಹಾಕುವವರು ಯಾರೂ ಇಲ್ಲ. ಉಳಿದಂತೆ ಬಿಜೆಪಿಗೆ ಇಲ್ಲಿ ಬಲ ಇಲ್ಲ. ಸ್ಥಳೀಯ ಮುಖಂಡರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು ಕಳೆದ ಬಾರಿ ಸ್ಪರ್ಧಿಸಿದ್ದ ನಂದಿನಿಗೌಡ ಈ ಬಾರಿ ಹೋರಾಟ ಮುಂದುವರಿಸುವ ಸಾಧ್ಯತೆಗಳು ಇವೆ. ಆದರೆ, ಇವರ ಸ್ಪರ್ಧೆ ಡಿ.ಕೆ. ಶಿವಕುಮಾರ್ ಗೆಲುವಿಗೆ ಅಡ್ಡಿ ಆಗದು.