ಪಿಆರ್‌ಸಿಐ ಗ್ಲೋಬಲ್ ಕಮ್ಯುನಿಕೇಶನ್ ಕಾನ್‌ಕ್ಲೇವ್ ಅನ್ನು ಮಂಗಳೂರು ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಉದ್ಘಾಟಿಸಿದರು. ನಿವೃತ್ತ ಐಎಎಸ್ ಅಧಿಕಾರಿ ಎಸ್.ನರೇಂದ್ರ, ಎಡಿ ಫ್ಯಾಕ್ಟರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮದನ್ ಬೇಲ್, ನಿವೃತ್ತ ಐಎಎಸ್ ಅಧಿಕಾರಿ ಚಕ್ರವರ್ತಿ ಮೋಹನ್, ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್, ಪೋಷಕ ಎಂ.ಬಿ.ಜಯರಾಮ್, ಸಮ್ಮೇಳನ ಅಧ್ಯಕ್ಷ ಶ್ರೀನಿವಾಸ ಮೂರ್ತಿ, ಪಬ್ಲಿಕ್ ರಿಲೇಷನ್ ಆಫ್ ಇಂಡಿಯಾದ ಅಧ್ಯಕ್ಷೆ ಗೀತಾ ಶಂಕರ್, ವೈಸಿಸಿ ಮುಖ್ಯಸ್ಥೆ ಚಿನ್ಮಯಿ ಪ್ರವೀಣ್ ಇದ್ದರು. 
ಜಿಲ್ಲೆ

ಸಾರ್ವಜನಿಕ ಸಂಪರ್ಕ ವ್ಯವಸ್ಥೆ ಮರುವ್ಯಾಖ್ಯಾನ; ಪಿಆರ್‌ಸಿಐ ಗ್ಲೋಬಲ್ ಕಮ್ಯುನಿಕೇಶನ್ ಕಾನ್‌ಕ್ಲೇವ್‌ನಲ್ಲಿ ಎಸ್.ನರೇಂದ್ರ ಸಲಹೆ

Mangaluru - Prakash MC Manjeshwar

ವಿಜಯವಾಣಿ ಸುದ್ದಿಜಾಲ ಮಂಗಳೂರು

ಇಂದಿನ ಡಿಜಿಟಲ್ ಯುಗದಲ್ಲಿ ಕೃತಕ ಬುದ್ಧಿಮತ್ತೆಯ ಸವಾಲಿನ ನಡುವೆ ಸಾರ್ವಜನಿಕ ಸಂಪರ್ಕ ವ್ಯವಸ್ಥೆಯ ಮರುವ್ಯಾಖ್ಯಾನ ನಡೆಸುವುದು ಸೂಕ್ತ ಎಂದು ಭಾರತದ ನಾಲ್ವರು ಮಾಜಿ ಪ್ರಧಾನಮಂತ್ರಿಗಳ ವಾರ್ತಾ ಸಲಹೆಗಾರರಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಎಸ್.ನರೇಂದ್ರ ಹೇಳಿದರು.

ಅಖಿಲ ಭಾರತ ಸಾರ್ವಜನಿಕ ಸಂಪರ್ಕ ಮಂಡಳಿ(ಪಿಆರ್‌ಸಿಐ) ಆಯೋಜಿಸಿದ ಎರಡು ದಿನಗಳ 18ನೇ ಗ್ಲೋಬಲ್ ಕಮ್ಯುನಿಕೇಶನ್ ಕಾನ್‌ಕ್ಲೇವ್‌ನಲ್ಲಿ ಶುಕ್ರವಾರ ದಿಕ್ಸೂಚಿ ಭಾಷಣ ಮಾಡಿದರು.

ಕೃತಕ ಬುದ್ಧಿಮತ್ತೆ ಹಾಗೂ ಯಾಂತ್ರಿಕತೆಯ ಈ ಯುಗದಲ್ಲಿ ಎಲ್ಲವೂ ಸ್ವಯಂಚಾಲಿತವಾಗಿ ನಡೆಯುತ್ತದೆ ಎಂಬ ಭಾವನೆ ಬಂದಿದೆ. 2001ರಲ್ಲಿ ಗೂಗಲ್ ಪ್ರವೇಶ ಮಾಡಿದಾಗ ಹಾಗೂ ನಂತರದ ಡಿಜಿಟಲ್ ಮಾಧ್ಯಮ ಬೆಳವಣಿಗೆ ಗಮನಿಸಿದಾಗ ಸಮಯದ ಪರಿಮಿತಿಯನ್ನೇ ಕಳಕೊಳ್ಳುತ್ತಿದ್ದೇವೆ ಎಂದು ಅನಿಸತೊಡಗಿದೆ ಎಂದರು.

ಸ್ಮಾರ್ಟ್‌ಫೋನ್ ಎನ್ನುವ ಸಾಧನ ಇಂದು ಕೇವಲ ಸಂಪರ್ಕ ಮಾಧ್ಯಮವಾಗಿ ಉಳಿದಿಲ್ಲ. ಅದು ಜೇಬಿನಲ್ಲಿರುವ ವ್ಯಾವಹಾರಿಕ ಸಾಧನವಾಗಿ ಪರಿವರ್ತನೆಗೊಂಡಿದೆ. ಸ್ಮಾರ್ಟ್ ಫೋನ್ ಮತ್ತು ಕಂಪ್ಯೂಟರ್‌ಗಳನ್ನು ಸ್ವಿಚ್ ಆಫ್ ಮಾಡಿಟ್ಟರೂ ನಮ್ಮ ಮೇಲೆ ಇನ್ನೊಬ್ಬರು ನಿಗಾ ಇಡಲು ಸಾಧ್ಯ ಎಂದರು.

ಸಮ್ಮೇಳನ ಉದ್ಘಾಟಿಸಿದ ಎಡಿ ಫ್ಯಾಕ್ಟರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮದನ್ ಬೇಲ್, ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಭಾರಿ ಬದಲಾವಣೆ ಆಗಿದ್ದು ವೇಗವಾಗಿ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮ ಸಂವಹನವನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದರು.

ಮೇಯರ್ ಮನೋಜ್ ಕುಮಾರ್ ಕೋಡಿಕಲ್, ನಿವೃತ್ತ ಐಎಎಸ್ ಅಧಿಕಾರಿ ಚಕ್ರವರ್ತಿ ಮೋಹನ್, ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್, ಪೋಷಕ ಎಂ.ಬಿ.ಜಯರಾಮ್, ಸಮ್ಮೇಳನದ ಅಧ್ಯಕ್ಷ ಶ್ರೀನಿವಾಸ ಮೂರ್ತಿ, ಪಬ್ಲಿಕ್ ರಿಲೇಷನ್ ಆಫ್ ಇಂಡಿಯಾ ಅಧ್ಯಕ್ಷೆ ಗೀತಾ ಶಂಕರ್, ವೈಸಿಸಿ ಮುಖ್ಯಸ್ಥೆ ಚಿನ್ಮಯಿ ಪ್ರವೀಣ್ ಉಪಸ್ಥಿತರಿದ್ದರು. ನಿಖಿಲ್ ನಿರೂಪಿಸಿದರು.

ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್ಬೈಲ್, ನಟ ದೇವದಾಸ್ ಕಾಪಿಕಾಡ್, ನಿರ್ದೇಶಕ ಶಿವಧ್ವಜ, ಗಾಯಕ ರಮೇಶ್ಚಂದ್ರ, ಪತ್ರಕರ್ತ ಬಾಲಸುಬ್ರಹ್ಮಣ್ಯ ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ನಿರಂಜನ ವಾನಳ್ಳಿ ಅವರ ‘ನಿಮಗಾಗಿಯೇ ಆಯ್ದು ಪೋಣಿಸಿದ ನುಡಿಮುತ್ತುಗಳು’ ಪುಸ್ತಕ ಬಿಡುಗಡೆ ಮಾಡಲಾಯಿತು.

-------

ಸ್ಮಾರ್ಟ್ ಫೋನ್‌ಗಳು ಒಳಗೊಂಡಂತೆ ತಂತ್ರಜ್ಞಾನದ ಸ್ಫೋಟವು ಜಗತ್ತನ್ನು ಹತ್ತಿರ ಮಾಡಿದಂತೆ ಭಾಸವಾದರೂ ವಾಸ್ತವದಲ್ಲಿ ಸಂಬಂಧಗಳು ದೂರವಾಗುತ್ತಿವೆ ಎಂಬುದನ್ನು ಅಧ್ಯಯನ ವರದಿಗಳು ದೃಢಪಡಿಸಿವೆ. ಅಧ್ಯಯನವೊಂದರ ಪ್ರಕಾರ ಕೆಲವು ವರ್ಷಗಳ ಹಿಂದೆ ಮನೆಯ ಹಿರಿಯರು ಕುಟುಂಬದ ಸದಸ್ಯರ ಜತೆ ಪ್ರತಿ ದಿನ ಸರಾಸರಿ 16 ಸಾವಿರ ಪದಗಳನ್ನು ಆಡುವ ಅವಕಾಶ ದೊರೆಯುತ್ತಿತ್ತು. ಆದರೆ ಈಚೆಗೆ ಅದು 5 ಸಾವಿರ ಪದಗಳಿಗೆ ಕುಸಿದಿದೆ. ತಂತ್ರಜ್ಞಾನ ಮನುಷ್ಯನನ್ನು ತನ್ನ ದಾಸನನ್ನಾಗಿ ಮಾಡಿ, ಸಮಯ ಹಾಳು ಮಾಡಲು ಪ್ರೇರೇಪಿಸುತ್ತಿದೆ. ಡಿಜಿಟಲ್ ಜಗತ್ತು ಮಾನವಕುಲವನ್ನೇ ಅಲುಗಾಡಿಸುತ್ತಿದೆ. ಇಂಥ ಪರಿಸ್ಥಿತಿಯಿಂದ ಬಿಡುಗಡೆ ಬೇಕಾಗಿದೆ.

* ಎಸ್.ನರೇಂದ್ರ, ನಿವೃತ್ತ ಐಎಎಸ್ ಅಧಿಕಾರಿ