ಜಿಲ್ಲೆ

ಮಳೆಗಾಗಿ ಮರೂರು ಗ್ರಾಮದಲ್ಲಿ ಸಾಮೂಹಿಕ ಪೂಜೆ

ಎ. ಆರ್. ರಘುರಾಮ

ಕುಶಾಲನಗರ : ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಗ್ರಾಮದಲ್ಲಿ ಮಳೆಗಾಗಿ ಗ್ರಾಮದ ಹೊರಭಾಗದಲ್ಲಿರುವ ಬಪ್ಪುರಾಯ ಸ್ವಾಮಿ ದೇವರಿಗೆ ಗ್ರಾಮಸ್ಥರು ಭಾನುವಾರ ಪೂಜೆ ನೆರವೇರಿಸಿದರು.
ಗ್ರಾಮದ ಕೃಷಿಕ ಮಹೇಶ್ ಹಾಗೂ ಶಿಕ್ಷಕಿ ಸುನೀತಾ ಮಹೇಶ್ ದಂಪತಿ ಅರಕಲಗೂಡಿನಿಂದ ಅರ್ಚಕರನ್ನು ಆಹ್ವಾನಿಸಿ ಗ್ರಾಮಸ್ಥರನ್ನು ದೇವರ ಸನ್ನಿಧಿಗೆ ಬರಮಾಡಿಕೊಂಡು ವಿಶೇಷವಾಗಿ ಪೂಜೆ ಸಮರ್ಪಿಸಿದರು. ಮಳೆ ಸುರಿಸಿ ಭೂಮಿಯನ್ನು ತಂಪುಗೊಳಿಸಲೆಂದು ಮಳೆರಾಯನನ್ನು ಸಾಮೂಹಿಕವಾಗಿ ಪ್ರಾರ್ಥಿಸಿದರು.
ಕೃಷಿಕ ಮಹೇಶ್ ಮಾತನಾಡಿ, ಹಿಂದೆಂದೂ ಕಂಡರಿಯದ ಬರ ನಾಡನ್ನು ಆವರಿಸಿದೆ. ಎಲ್ಲೆಡೆ ಕೊಳವೆ ಬಾವಿಗಳು ಬತ್ತಿವೆ. ಜೀವ ನದಿ ಕಾವೇರಿ ಒಣಗುತ್ತಿದೆ. ಹಾಗಾಗಿ ಮಳೆ ಸುರಿಸಿ ನಾಡಿನ ಜನರನ್ನು ಉದ್ಧರಿಸು ಎಂದು ಗ್ರಾಮದ ರೈತರೊಂದಿಗೆ ಪ್ರಾರ್ಥಿಸಿದ್ದಾಗಿ ಹೇಳಿದರು.
ಪೂಜೆ ಹಾಗೂ ಪ್ರಾರ್ಥನೆಯ ಬಳಿಕ ನೆರೆದ ಗ್ರಾಮಸ್ಥರಿಗೆ ಸಿಹಿ ಬೂಂದಿ, ಪಾಯಸದ ಊಟ ನೀಡಲಾಯಿತು.
ಮರೂರು ಗ್ರಾಮದ ಹಿರಿಯ ನಾಗರಿಕ ಶಿವರುದ್ರಪ್ಪ, ಕೊಡಗರಹಳ್ಳಿ ಪಿಡಿಒ ರಾಜಶೇಖರ್, ಶಿವಣ್ಣ, ಆನಂದ, ಭರತ, ಚಿದಂಬರ, ರೇವಣ್ಣ, ಮಂಜುಳಾ, ಗಿರಿಜಾ, ಶಶಿಕಲಾ, ಪುಟ್ಟಮ್ಮಣ್ಣಿ ಇತರರು ಇದ್ದರು.