ಮಂಡ್ಯ: ನಿರೀಕ್ಷೆಯಂತೆ ಮುಂಗಾರು ಮಳೆ ಬಾರದ ಹಿನ್ನೆಲೆಯಲ್ಲಿ ವರುಣನಿಗಾಗಿ ಪ್ರಾರ್ಥಿಸಿ ತಾಲೂಕಿನ ಹೊಳಲು ಗ್ರಾಮದಲ್ಲಿ ವಿಶೇಷ ಪೂಜೆ ಮಾಡಲಾಯಿತು.
ಗ್ರಾಮದ ಜಂಗಿಮೊಹಲ್ಲಾ ವೃತ್ತದ ಯುವಕರು ಮಳೆರಾಯನಿಗೆ ಪ್ರಾರ್ಥಿಸಿ ಆಚರಣೆ ನಡೆಸಿದರು. ಮಣ್ಣಿನಲ್ಲಿ ಮಳೆರಾಯನ ಮೂರ್ತಿ ಮಾಡಿ ತಮಟೆ ವಾದ್ಯದೊಂದಿಗೆ ಎಲ್ಲ ದೇವಸ್ಥಾನದಲ್ಲಿಯೂ ಪೂಜೆ ಸಲ್ಲಿಸಲಾಯಿತು. ಅಂತೆಯೇ ಮಣ್ಣಿನಮೂರ್ತಿಯನ್ನು ಹೊತ್ತು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಹುಯ್ಯೋ ಹುಯ್ಯೋ ಮಳೆರಾಯ ಎಂದು ೋಷಣೆ ಕೂಗಿ ಪ್ರಾರ್ಥಿಸಲಾಯಿತು. ಗ್ರಾಮದ ದೂರಪ್ಪ, ರಾಜೇಶ್, ದರ್ಶನ್ ಇತರರಿದ್ದರು.
ಆಚರಣೆಗಿದೆ ಬಲವಾದ ನಂಬಿಕೆ: ಜಿಲ್ಲೆಯಲ್ಲಿ ಮಳೆರಾಯನ ಆಚರಣೆಗೆ ವಿಶೇಷ ಸ್ಥಾನವಿದೆ. ಮಾತ್ರವಲ್ಲದೆ ಹಲವು ದಶಕದಿಂದಲೂ ಇದನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಮಳೆ ಕೈಕೊಟ್ಟಾಗ ಗ್ರಾಮಸ್ಥರೆಲ್ಲರೂ ಸೇರಿ ಮಣ್ಣಿನಲ್ಲಿ ಮೂರ್ತಿ ಮಾಡಿ ಗ್ರಾಮದ ಪ್ರತಿ ಮನೆಗೂ ಮೂರ್ತಿಯನ್ನು ಹೊತ್ತುಕೊಂಡು ಹೋಗಿ ನೀರನ್ನು ಅದನ್ನು ಹಾಕಿಸುತ್ತಾರೆ. ಜತೆಗೆ ಮೆರವಣಿಗೆ ನಂತರ ಗ್ರಾಮದ ಹೊರವಲಯದಲ್ಲಿ ಮೂರ್ತಿಯನ್ನಿಟ್ಟು ಮಳೆ ಬರುವಂತೆ ಪ್ರಾರ್ಥಿಸಲಾಗುತ್ತಿದೆ. ಕೆಲವೆಡೆ ಅಡುಗೆ ಮಾಡಿ ಸ್ಥಳದಲ್ಲಿಯೇ ಊಟ ಮಾಡುವ ಸಂಪ್ರದಾಯವೂ ಇದೆ.