ಜಿಲ್ಲೆ

ಹತ್ಯೆಯಿಂದ ಬಿಜೆಪಿ ಶಕ್ತಿ ಕುಗ್ಗಿಸುವುದು ಅಸಾಧ್ಯ

ಗೋಪಾಲಕೃಷ್ಣ ಪಾದೂರ್

ಉಡುಪಿ: ಸುಳ್ಯದ ಬೆಳ್ಳಾರೆಯಲ್ಲಿ ಜಿಹಾದಿಗಳಿಂದ ಪ್ರವೀಣ್ ನೆಟ್ಟಾರ್ ಕಗ್ಗೊಲೆಯಾಗಿದೆ. ಇದರಿಂದ ಸಂಘಟನೆಯ ಶಕ್ತಿಯನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಶನಿವಾರ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಕಚೇರಿಯಲ್ಲಿ ದ.ಕ. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರ್ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡುವುದು ನೆಪ ಮಾತ್ರ. ಆದರೆ ಇದರ ಹಿಂದೆ ಇರುವ ಮತಾಂಧರ ಹುನ್ನಾರ ಅರಿಯಬೇಕಿದೆ. ಬಿಜೆಪಿ ಪಕ್ಷಕ್ಕೆ ಇದು ಪರೀಕ್ಷೆಯ ಕಾಲಘಟ್ಟ. ಕಾರ್ಯಕರ್ತರು ಮನನೊಂದು ರಾಜಿನಾಮೆ ನೀಡುವುದು ಸೂಕ್ತವಲ್ಲ. ಮನೆಗೆ ಬೆಂಕಿ ಬಿದ್ದಾಗ ಅಗ್ನಿಶಾಮಕ ದಳ ಕರಿಯಬೇಕು. ಅದನ್ನು ಬಿಟ್ಟು ಪೆಟ್ರೋಲ್ ಹುಡುಕುವುದಲ್ಲ. ಎಲ್ಲರೂ ಒಟ್ಟಾಗಿ ಪರಿಸ್ಥಿತಿ ಎದುರಿಸಬೇಕು ಎಂದರು.

ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಎಸ್.ಡಿ.ಪಿ.ಐ, ಪಿ.ಎಫ್.ಐ ಸಂಘಟನೆಗಳನ್ನು ಮುಸ್ಲಿಮರು ದೂರವಿಟ್ಟಾಗ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಿದೆ. ಹಿಜಾಬ್ ವಿವಾದದಲ್ಲಿ ಕೈಜೋಡಿಸಿದ ಭಯೊತ್ಪಾದಕ ಜಿಹಾದಿ ಸಂಘಟನೆಗಳು ಪ್ರವೀಣ್ ನೆಟ್ಟಾರ್ ಹತ್ಯೆಯಲ್ಲಿ ಭಾಗಿಯಾಗಿವೆ ಎಂದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್. ಕಲ್ಮಾಡಿ, ಉಡುಪಿ ನಗರ ಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರತ್ ಶೆಟ್ಟಿ ಉಪ್ಪುಂದ ಉಪಸ್ಥಿತರಿದ್ದರು.