ಜಿಲ್ಲೆ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಎಸ್.ಡಿ.ಪಿ.ಐ ನಾಯಕರ ಬಂಧನ ಖಂಡಿಸಿ ಪ್ರತಿಭಟನೆ

ಮಡಿಕೇರಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ) ಎಸ್.ಡಿ.ಪಿ.ಐ. ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಅವರನ್ನು ದುರುದ್ದೇಶಪೂರ್ವಕವಾಗಿ ಬಂಧಿಸಿದೆ ಎಂದು ಆರೋಪಿಸಿ ನಗರದಲ್ಲಿ ಎಸ್.ಡಿ.ಪಿ.ಐ. ವತಿಯಿಂದ ಪ್ರತಿಭಟನೆ ನಡೆಯಿತು.


ಇಂದಿರಾಗಾಂಧಿ ವೃತ್ತದಲ್ಲಿ ಜಮಾಹಿಸಿದ ಪ್ರತಿಭಟನಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ನಗರಸಭಾ ಸದಸ್ಯ ಅಮೀನ್ ಮೊಹ್ಸಿನ್ ಮಾತನಾಡಿ, ಯಾವುದೇ ಆಧಾರವಿಲ್ಲದೆ ರಾಜಕೀಯ ಪ್ರೇರಿತವಾಗಿ ಬಂಧಿಸಲಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಐ.ಎ. ಕೈಗೊಂಡ ತನಿಖೆಯಿಂದ ಯಾವುದೇ ಬಲವಾದ ಸಾಕ್ಷ್ಯಧಾರಗಳು ಲಭ್ಯವಾಗಿಲ್ಲ. ಇದೀಗ ಬಿಜೆಪಿ ಸರ್ಕಾರದ ಒತ್ತಡಕ್ಕೆ ಮಣಿದು ಎಸ್.ಡಿ.ಪಿ.ಐ. ನಾಯಕರ ಬಂಧನಕ್ಕೆ ಮುಂದಾಗಿದೆ. ರಾಜಕೀಯ ಬೆಳವಣಿಗೆಗೆ ಬಿಜೆಪಿ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಈ ಮೂಲಕ ಎಸ್.ಡಿ.ಪಿ.ಐ. ಅನ್ನು ಧಮನ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಬಂಧಿಸಿದ ಎಸ್.ಡಿ.ಪಿ.ಐ. ನಾಯಕರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.


ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಕಲೀಲ್, ಕಾರ್ಯದರ್ಶಿ ಶಫಿ,ನಗರ ಅಧ್ಯಕ್ಷ ರಿಜ್ವಾನ್, ಉಪಾಧ್ಯಕ್ಷ ಮೈಕಲ್ ವೇಗಸ್ ನಗರಸಭಾ ಸದಸ್ಯ ಮನ್ಸೂರ್ ಅಲಿ, ಬಷೀರ್, ಮೇರಿವೇಗಸ್ ಸೇರಿದಂತೆ ಇನ್ನಿತರರು ಹಾಜರಿದ್ದರು.