ನಾರ್ವೆ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಜಿ.ಬಿ.ಪ್ರವೀಣ್‌ಗೌಡ ಅವರನ್ನು ನಿರ್ದೇಶಕರು ಹಾಗೂ ಗ್ರಾಮಸ್ಥರು ಅಭಿನಂದಿಸಿದರು. 
ಜಿಲ್ಲೆ

ಪ್ರವೀಣ್‌ಗೌಡ ನಾರ್ವೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ

ಬೇಲೂರು: ತಾಲೂಕಿನ ನಾರ್ವೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜಿ.ಆರ್.ಪ್ರವೀಣ್‌ಗೌಡ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.

ಗೀತಾ ಲಕ್ಷ್ಮಣ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಆದರೆ ಜಿ.ಆರ್.ಪ್ರವೀಣ್‌ಗೌಡ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಗುರುಮೂರ್ತಿ ಅವಿರೋಧವಾಗಿ ಆಯ್ಕೆಯನ್ನು ಘೋಷಿಸಿದರು.

ನೂತನ ಅಧ್ಯಕ್ಷ ಜಿ.ಆರ್ ಪ್ರವೀಣ್‌ಗೌಡ ಮಾತನಾಡಿ, ನಾನು ಎರಡನೇ ಬಾರಿಗೆ ನಿರ್ದೇಶಕನಾಗಿ ಆಯ್ಕೆಯಾಗಿದ್ದ ಹಿನ್ನೆಲೆಯಲ್ಲಿ ಹಿರಿಯ ನಿರ್ದೇಶಕರು ಹಾಗೂ ನಿಕಟಪೂರ್ವ ಅಧ್ಯಕ್ಷರ ಸಹಕಾರ ಪಡೆದು ಅಧ್ಯಕ್ಷನಾಗಿದ್ದೇನೆ. ಈ ಅಧ್ಯಕ್ಷ ಸ್ಥಾನಕ್ಕೆ ಚ್ಯುತಿ ಬಾರದಂತೆ ಎಲ್ಲರ ಸಹಕಾರ ಪಡೆದು ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು.

ನಿರ್ದೇಶಕ ಕೃಷ್ಣೇಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬೆಲೆ ಏರಿಕೆಯಂತಹ ಸಮಸ್ಯೆ ರೈತರನ್ನು ಕಾಡುತ್ತಿದೆ. ಆದ್ದರಿಂದ ನಮ್ಮ ಸಂಘದ ಮೂಲಕ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ, ಕೃಷಿ ಸಂಬಂಧ ದೊರಕುವ ಯೋಜನೆಗಳನ್ನು ಸಮರ್ಪಕವಾಗಿ ರೈತರಿಗೆ ತಲುಪಿಸುವ ಕೆಲಸವನ್ನು ಅಧ್ಯಕ್ಷರ ಜತೆಗೂಡಿ ಮಾಡುತ್ತೇವೆ ಎಂದರು.

ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್, ಮೇಲ್ವಿಚಾರಕ ದಿನೇಶ್, ನಿರ್ದೇಶಕರಾದ ಸೋಮಯ್ಯ, ದೇವರಾಜು, ಮಧುಕುಮಾರ್, ಗೀತಾ, ಚೇತನ್ ಕುಮಾರ್, ಇಒ ಜ್ಯೋತಿ ಮುಖಂಡರಾದ ಎಸ್.ಶ್ರೀಕಾಂತ್, ಮಲ್ಲಿಕಾರ್ಜುನ್ ನಾರ್ವೆ, ರಾಜಶೇಖರ್, ಸಂಪತ್, ಹೇಮರಾಜ್ ಮತ್ತಿತರರಿದ್ದರು.