ಶಿವಮೊಗ್ಗ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದವರನ್ನು ಬಂಧಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನಮ್ಮ ಸರ್ಕಾರ ಬಲಹೀನವಾಗಿಲ್ಲ. ಶಾಂತಿ ಕಾಪಾಡಲು ಹಿಂದುಗಳು ಸಂಯಮದಿಂದ ಇದ್ದಾರೆ. ಎಷ್ಟು ದಿನ ಹೀಗೆ ಎಲ್ಲವನ್ನೂ ಸಹಿಸಿಕೊಳ್ಳುವುದು? ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ.
ವಿನಾ ಕಾರಣ ಕೆಲವು ಹಿಂದುತ್ವವಾದಿಗಳನ್ನು ಮುಸಲ್ಮಾನ್ ಗೂಂಡಾಗಳು ಕಗ್ಗೊಲೆ ಮಾಡುತ್ತಿದ್ದಾರೆ. ಇದನ್ನು ಎಲ್ಲ ರಾಜಕೀಯ ಪಕ್ಷಗಳೂ ಖಂಡಿಸಬೇಕು. ಅಂತವರನ್ನು ಯಾರೂ ಬೆಂಬಲಿಸಬಾರದು. ಹಿಂದುಗಳು ಶಾಂತಿ ಪ್ರಿಯರು. ಕೊಲೆಗೆ ಪ್ರತಿಯಾಗಿ ಕೊಲೆ ಮಾಡಬೇಕೆಂಬುದು ನಮ್ಮ ಉದ್ದೇಶವಲ್ಲ. ಮೂಲಭೂತವಾದಿಗಳು ಮನಸ್ಥಿತಿ ಬದಲಾವಣೆ ಮಾಡಿಕೊಳ್ಳದಿದ್ದರೆ ಸೂಕ್ತ ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಚಿಕ್ಕಮಗಳೂರಿನಲ್ಲಿ ಯುವ ಮೋರ್ಚಾ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆಗೆ ಮುಂದಾಗಿರುವ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ನಮ್ಮ ಕಾರ್ಯಕರ್ತರಿಗೆ ರಕ್ಷಣೆ ನೀಡಲು ಆಗುತ್ತಿಲ್ಲ ಎಂಬುದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ನಮ್ಮ ಕಾರ್ಯಕರ್ತರನ್ನು ಹುಡುಕಿ ಹುಡುಕಿ ಕೊಲೆ ಮಾಡುತ್ತಿದ್ದಾರೆ. ಆದರೆ ಕಾರ್ಯಕರ್ತರ ರಾಜೀನಾಮೆ ಅದಕ್ಕೆ ಪರಿಹಾರವಲ್ಲ. ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಎಂದರು.