ಹುಬ್ಬಳ್ಳಿ: ಅಪಾರ ಜನಸಂಖ್ಯೆಯ ಭಾರತಕ್ಕೆ ರಾಸಾಯನಿಕ ಹಾಗೂ ವಿದೇಶಿ ಔಷಧಿ ಪ್ರಯೋಜನಕಾರಿಯಾಗುವುದಿಲ್ಲ, ಬದಲಾಗಿ ನಿಸರ್ಗ ಚಿಕಿತ್ಸೆಯನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಿರೂರಿನ ಚಿತ್ತರಗಿ ವಿಜಯ ಮಹಾಂತೇಶ ಶಾಖಾ ಮಠದ ಡಾ. ಬಸವಲಿಂಗ ಸ್ವಾಮೀಜಿ ಹೇಳಿದರು.
ಇಲ್ಲಿಯ ಉಣಕಲ್ಲ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಪ್ರವಚನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಮಣ್ಣು, ಗಾಳಿ, ಬೆಳಕು, ನೀರು, ಅಗ್ನಿ ಎಂಬ ಪಂಚ ಭೂತಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನಿಸರ್ಗ ಚಿಕಿತ್ಸೆಯು ಭಾರತೀಯರ ಉಸಿರಾಗಬೇಕು ಎಂದರು.
ಮಣ್ಣಿನಿಂದ ಬಂದ ಕಾಯಕ್ಕೆ ಮಣ್ಣೇ ರೋಗ ಪರಿಹಾರ ನೀಡುವ ಅಪರೂಪದ ದಿವ್ಯ ಶಕ್ತಿ ಹೊಂದಿದೆ. ಅನಿಷ್ಟಗಳನ್ನೆಲ್ಲ ದೂರಗೊಳಿಸಿ ರಕ್ಷಣೆ ನೀಡುವ ಶಕ್ತಿ ಇಷ್ಟಲಿಂಗ ಪೂಜೆಯಲ್ಲಡಗಿದೆ. ಇದನ್ನು ಸಾಮಾನ್ಯ ಭಕ್ತರಿಗೆ ನೀಡಿದವರು ಬಸವಣ್ಣ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ವಚನಗಳು ಬದುಕನ್ನು ಸರಳವಾಗಿ ರೂಪಿಸುವ ಕೈಪಿಡಿ ಎಂದರು.
ಹುಕ್ಕೇರಿ ಚರಂತೇಶ್ವರ ಮಠದ ಬಸವ ದೇವರು ಭಕ್ತಿಯ ಪ್ರವಚನ ನೀಡಿದರು. ಉಣಕಲ್ ಸಂತ ಮರಿಗೌಡ್ರ ಕಾಮಧೇನು ಇದ್ದರು.
ದೇವಸ್ಥಾನ ಸಮಿತಿ ಉಪಾಧ್ಯಕ್ಷ ರಾಮಣ್ಣ ಪದ್ಮಣ್ಣವರ, ಅಡಿವೆಪ್ಪ ಮೆಣಸಿನಕಾಯಿ, ಗುರುಸಿದ್ದಪ್ಪ ಬೆಟಗೇರಿ, ಶಿವಾಜಿ ಕನ್ನಿಕೊಪ್ಪ, ಚನ್ನಬಸಪ್ಪ ಧಾರವಾಡಶೆಟ್ರು ಮುಂತಾದವರು ಉಪಸ್ಥಿತರಿದ್ದರು.
ಶಂಕರಯ್ಯ ಸ್ವಾಮಿ ವಾದ್ಯ ಸಹಕಾರದಲ್ಲಿ ಹನುಮಂತ ಗವಾಯಿಗಳು ಭಕ್ತೀಗಿತೆಗಳನ್ನು ಹಾಡಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಹಾಗೂ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಸ್ವಾಗತಿಸಿದರು. ಎಸ್.ಐ. ನೇಕಾರ ವಂದಿಸಿದರು.