ಜಿಲ್ಲೆ

ಸಮುದಾಯದ ಅಭಿವೃದ್ಧಿಗೆ ಸಂಘಟನೆ ಅವಶ್ಯಕ: ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ಸಮುದಾಯಗಳ ಅಭಿವೃದ್ಧಿಯಾಗುವುದರ ಜತೆಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಮುಖ್ಯವಾಹಿನಿಗೆ ಬರುವುದಕ್ಕೆ ಸಂಘಟನೆ ಅವಶ್ಯಕವಾಗಿದೆ. ಹಾಗೆಂದು ಉಳಿದ ಸಮುದಾಯದೊಂದಿಗಿನ ಸಾಮರಸ್ಯಕ್ಕೆ ಧಕ್ಕೆಯಾಗದ ರೀತಿ ಮೇಲುಸ್ತರಕ್ಕೆ ಬರಲು ಪ್ರಯತ್ನಿಸಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಸಲಹೆ ನೀಡಿದರು.

ನಗರದ ಕರ್ನಾಟಕ ಸಂಘದಲ್ಲಿ ಸರ್ವಜ್ಞ ಕುಂಬಾರ ಸೇವಾ ಟ್ರಸ್ಟ್, ಕುಂಬಾರರ ಜಾಗೃತಿ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಜಾತಿ ವಿನಾಶ ಎಂದಿಗೂ ಸಾಧ್ಯವಿಲ್ಲ. ಆದರೆ, ಬೇರೆ ಜಾತಿಗಳೊಂದಿಗೆ ಸಂಘರ್ಷಕ್ಕಿಳಿಯದೆ ಸಾಮರಸ್ಯದೊಂದಿಗೆ ಜೀವನ ನಡೆಸುವುದು ಅವಶ್ಯವಾಗಿದೆ ಎಂದರು.

ಜಾತ್ಯಾತೀತ ಎನ್ನುವುದು ಮಾದರಿಯಷ್ಟೇ. ಅದನ್ನು ಸಂಪೂರ್ಣವಾಗಿ ಜಾರಿಗೊಳಿಸಲಾಗದು. ಸತ್ಯ ಎನ್ನುವುದೂ ಒಂದು ಮಾದರಿಯಷ್ಟೇ. ಅದನ್ನು ಪೂರ್ಣವಾಗಿ ಕಂಡುಕೊಳ್ಳಲಾಗುವುದಿಲ್ಲ. ಪ್ರತಿ ಜಾತಿಯವರು ಅವರವರ ಸಮುದಾಯವನ್ನು ಪ್ರೀತಿಸುತ್ತಾ ಗೌರವಿಸುತ್ತಾರೆ. ಜಾತಿಗಳು ಅಭಿವೃದ್ಧಿಯಾಗಬೇಕಾದರೆ ಮೊದಲು ಕೀಳರಿಮೆ ತೊರೆಯಬೇಕು. ಶಿಕ್ಷಣವಂತರಾಗಿ ಉನ್ನತ ಸ್ಥಾನಗಳನ್ನು ಅಲಂಕರಿಸಿದಾಗ ಯಾವುದೇ ಜಾತಿಯವರಾದರೂ ಸಮಾಜದ ಗೌರವಕ್ಕೆ ಪಾತ್ರರಾಗುತ್ತಾರೆ ಎಂದರು.

ಬಿಬಿಎಂಪಿ ಸಹಾಯಕ ಆಯುಕ್ತ ದಿಲೀಪ್‌ಕುಮಾರ್ ಮಾತನಾಡಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದಕ್ಕೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ. ಈ ಪ್ರೋತ್ಸಾಹದೊಂದಿಗೆ ಮತ್ತಷ್ಟು ಸಾಧನೆಗೆ ಪ್ರೇರಣೆ ಪಡೆಯಬೇಕು. ಎಸ್ಸೆಸ್ಸೆಲ್ಸಿ ನಂತರ ನಿಮಗೆ ರೆಕ್ಕೆ ಬಿಚ್ಚುವ ಸಮಯ. ನಿಮ್ಮ ರೆಕ್ಕೆಯನ್ನು ದೊಡ್ಡದಾಗಿ ಬಿಚ್ಚುವಿರೋ ಅಷ್ಟು ಮುಂದಿನ ಭವಿಷ್ಯ ಉಜ್ವಲವಾಗುತ್ತದೆ ಎಂದು ತಿಳಿಸಿದರು.

ಮಕ್ಕಳ ಜತೆ ಪಾಲಕರು ತಾಳ್ಮೆ, ಸಂಯಮದಿಂದ, ಸ್ನೇಹಿತರಂತೆ ನಡೆದುಕೊಳ್ಳಬೇಕು. ನಾವು ಮಕ್ಕಳನ್ನು ಗಿಳಿಯಂತೆ ಸಾಕಿರುತ್ತೇವೆ. ಆದರೆ, ಹೊರಗಿನ ಪ್ರಪಂಚ ಅಷ್ಟೊಂದು ಮುಗ್ಧತೆಯಿಂದ ಕೂಡಿಲ್ಲ. ಮಕ್ಕಳನ್ನು ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಸಜ್ಜುಗೊಳಿಸಬೇಕು. ಪ್ರಾಪಂಚಿಕ ಜ್ಞಾನವನ್ನು ಬೆಳೆಸುವುದರೊಂದಿಗೆ ಸಂಸ್ಕಾರ, ಸಂಸ್ಕೃತಿಯನ್ನು ರೂಢಿಸಬೇಕು. ಸ್ವತಂತ್ರವಾಗಿ ಬದುಕುವುದನ್ನು ಕಲಿಸುವಂತೆ ಸಲಹೆ ನೀಡಿದರು.

ಸರ್ವಜ್ಞ ಕುಂಬಾರ ಸೇವಾ ಟ್ರಸ್ಟ್ ಅಧ್ಯಕ್ಷ ಆರ್.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಕುಂಬಾರರ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಕೃಷ್ಣ, ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ, ಹಾಸನದ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಪ್ರಕಾಶ್, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್, ಸರ್ವಜ್ಞ ಕುಂಬಾರ ಸೇವಾ ಟ್ರಸ್ಟ್ ಉಪಾಧ್ಯಕ್ಷ ಗುರುರಾಜು, ಟ್ರಸ್ಟಿ ಗಿರೀಶ್, ಭೀಮಪ್ಪ, ಕಾಂತರಾಜು, ಮಹೇಶ್, ಪ್ರದೀಪ್ ಇತರರಿದ್ದರು.