ಮಂಡ್ಯ: ವಿದ್ಯಾರ್ಥಿಗಳು ಪಠ್ಯದಲ್ಲಿ ಗಳಿಸುವ ಅಂಕಕ್ಕಿಂತ ಜೀವನದಲ್ಲಿ ಪಡೆಯುವ ಅಂಕ ಬಹಳ ಮುಖ್ಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಹೊರವಲಯದ ಅಮರಾವತಿ ಸಭಾಂಗಣದಲ್ಲಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರ ಮತ್ತು ನೌಕರರ ಕಲ್ಯಾಣ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ 2023-24ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಹಾಗೂ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ ಹಾಲು ಉತ್ಪಾದಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸಾಧನೆ ಅವರ ತಂದೆ, ತಾಯಿಗೆ ಸಲ್ಲಬೇಕು. ಪಾಲಕರಿಗಿಂತ ಮಿಗಿಲಾದ ಶಕ್ತಿ ಬೇರೊಂದಿಲ್ಲ. ದೇವರನ್ನು ನಾವು ಕಂಡಿಲ್ಲ, ನಂಬಿಕೆಯಿಂದ ಪೂಜೆ ಮಾಡುತ್ತೇವೆ. ಮೂರ್ತಿ ರೂಪದಲ್ಲಿ ದೊಡ್ಡ ಶಕ್ತಿ ಅದು ತಂದೆ-ತಾಯಿ ಮಾತ್ರ ಎಂದರು.
ಒಕ್ಕೂಟದ ಅಧ್ಯಕ್ಷ ಬಿ.ಬೋರೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಂ.ಎಸ್.ರಘುನಂದನ್, ನಿರ್ದೇಶಕರಾದ ಬಿ.ಆರ್.ರಾಮಚಂದ್ರು, ಎಸ್.ಪಿ.ಸ್ವಾಮಿ, ಎಂ.ರೂಪಾ, ಕೆ.ರಾಮಚಂದ್ರ, ಎಸ್.ಎನ್.ಲಕ್ಷ್ಮೀನಾರಾಯಣ, ರಾಮಕೃಷ್ಣ, ಟ್ರಸ್ಟ್ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಶ್ರೀಧರ್, ಡಾ.ಮಂಜೇಶ್ ಇತರರಿದ್ದರು.