ಮಂಡ್ಯ: ಇತ್ತೀಚಿನ ವರ್ಷದಲ್ಲಿ ಅಗತ್ಯಯುಳ್ಳವರಿಗೆ ದಾನಧರ್ಮ ಮತ್ತು ಆತ್ಮಸ್ಥೈರ್ಯ ತುಂಬುವ ಮನೋಭಾವ ಕ್ಷೀಣಿಸುತ್ತಿದೆ ಎಂದು ಸೆಂಟ್‌ಜಾನ್ ಆಂಬುಲೆನ್ಸ್ ಸಂಸ್ಥೆ ಜಿಲ್ಲಾ ಸಮಿತಿ ಕಾರ್ಯದರ್ಶಿ ಜಿ.ವಿ.ನಾಗರಾಜು ಬೇಸರ ವ್ಯಕ್ತಪಡಿಸಿದರು.
ನಗರದ ಡಾ.ನಾ.ಸು.ಹರ್ಡೀಕರ್ ಭವನದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ, ಸೆಂಟ್‌ಜಾನ್ ಆಂಬುಲೆನ್ಸ್ ಜಿಲ್ಲಾ ಸಮಿತಿ, ದಿಯಾ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಅಭಿನಂದನೆ, ಧನ ಸಹಾಯ ಸಮಾರಂಭದಲ್ಲಿ ಮಾತನಾಡಿದ ಅವರು, ಆಧುನಿಕತೆ ಬೆಳೆದಂತೆ ಮನುಷ್ಯನಲ್ಲಿ ಸೇವಾ ಮನೋಭಾವ, ದಾನ ಧರ್ಮ ಮರೆಯಾಗುತ್ತಿವೆ. ಅಗತ್ಯಯುಳ್ಳವರಿಗೆ ನೆರವಾಗುವ ಆತ್ಮಸ್ಥೈರ್ಯ ಇಲ್ಲದಾಗುತ್ತಿದೆ. ವಯೋವೃದ್ದರನ್ನು ಕಡೆಗಣಿಸಲಾಗುತ್ತಿದೆ ಎಂದರು.
ಭಾರತ ಸೇವಾದಳ ಜಿಲ್ಲಾ ಸಮಿತಿ ಸದಸ್ಯ ಬಿ.ಸಿ.ಶಿವಾನಂದ್ ಮಾತನಾಡಿ, ಸಮಾಜದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡಿದರೆ ಮತ್ತೆ ಅವರು ಸಮಾಜಕ್ಕೆ ಸಮರ್ಪಿಸುತ್ತಾರೆ ಎನ್ನುವ ಸದುದ್ದೇಶದಿಂದ ಇಂತಹ ಸುಕಾರ್ಯ ಮಾಡಲಾಗುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ನೋಡಿ ಉಳಿದರು ಕಲಿಯುವ ಉತ್ಸಾಹ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಗರಸಭಾ ಸದಸ್ಯ ಎಂ.ಎನ್.ಶ್ರೀಧರ್, ಕಾಂಗ್ರೆಸ್ ನಗರ ಬ್ಲಾಕ್ ಸಮಿತಿ ಅಧ್ಯಕ್ಷ ರುದ್ರಪ್ಪ, ಅಂಗವಿಕಲರ ಕಲ್ಯಾಣಾಧಿಕಾರಿ ಕೋಮಲ್‌ಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ್, ಸೇವಾದಳದ ಖಜಾಂಚಿ ಶಿವಪ್ರಕಾಶ್ ಬಾಬು, ಜಿಲ್ಲಾ ಸಂಘಟಕ ಸಿ.ಎಸ್.ಗಣೇಶ್, ನಾರಾಯಣಸ್ವಾಮಿ, ರಾಜಣ್ಣ ಇತರರಿದ್ದರು.
ಇದೇ ಸಂದರ್ಭದಲ್ಲಿ ದಿಯಾ ಚಾರಿಟಬಲ್ ಟ್ರಸ್ಟ್‌ನಿಂದ ಕೊಡಮಾಡುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಯಿತು. ಬಳಿಕ ಎಸ್‌ಎಸ್‌ಎಲ್ಸಿ ಮತ್ತು ದ್ವಿತೀಯ ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.