ಜಿಲ್ಲೆ

ಊರಿನ ಹಬ್ಬದಂತೆ ಪ್ರತಿಭಾ ಕಾರಂಜಿ ಆಚರಣೆ

ಸಿದ್ದಾಪುರ: ತಾಲೂಕಿನಲ್ಲಿಯೇ ಪ್ರಥಮ ಎನ್ನುವಂತೆ ಕಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ ಆಚರಿಸುತ್ತಿರುವುದು ಹಳಿಯಾಳ ಸಕಿಪ್ರಾ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸ್ಥಳೀಯರ ಸಹಕಾರದಿಂದ ಪ್ರತಿಭಾ ಕಾರಂಜಿ ಊರಿನ ಹಬ್ಬದಂತೆ ಆಚರಿಸಿದ್ದು ವಿಶೇಷವಾಗಿತ್ತು.

ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಹಳಿಯಾಳ ಸರ್ಕಾರಿ ಕಿರಿಯ ಪ್ರಾಥಮಿ ಶಾಲೆಯಲ್ಲಿ ಶಿಕ್ಷಣ ಇಲಾಖೆ, ಗ್ರಾಪಂ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಹಾರ್ಸಿಕಟ್ಟಾ ಮತ್ತು ಸಕಿಪ್ರಾ ಶಾಲೆ ಹಳಿಯಾಳ ವ್ಯಾಪ್ತಿಯ ಊರವರ ಸಹಯೋಗದಲ್ಲಿ ನಡೆದ ಹಾರ್ಸಿಕಟ್ಟಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಗ್ರಾಪಂ ಅಧ್ಯಕ್ಷೆ ಹನುಮಕ್ಕ ಭೋವಿ ಉದ್ಘಾಟಿಸಿದರು.

ಎಸ್ಡಿಎಂಸಿ ಅಧ್ಯಕ್ಷ ಪ್ರೇಮಾನಂದ ನಾಯ್ಕ ಅಧ್ಯಕ್ಷತೆವಹಿಸಿದ್ದರು.ಗ್ರಾಪಂ ಸದಸ್ಯರಾದ ಅಕ್ಷತಾ ಮಡಿವಾಳ, ಸರೋಜಾ ನಾಯ್ಕ, ಜಿಪಂ ಮಾಜಿ ಸದಸ್ಯ ಎಸ್.ಆರ್.ಹೆಗಡೆ ಕುಂಬಾರಕುಳಿ, ಸಾಮಾಜಿಕ ಕಾರ್ಯಕರ್ತ ಎಸ್.ಎನ್.ಹೆಗಡೆ ಬಕ್ಕೆಮನೆ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ, ಹಳಿಯಾಳ ಮಹಿಷಾಸುರ ಮರ್ಧಿನಿ ದೇವಾಲಯದ ಅರ್ಚಕ ಮಂಜುನಾಥ ನಾಯ್ಕ ಪೂಜಾರ ಹಳಿಯಾಳ, ಸಿಂಗಾರಪ್ರಿಯ ನಾಗಚೌಡೇಶ್ವರಿ ದೇವಾಲಯದ ಅರ್ಚಕ ಅಶೋಕ ನಾಯ್ಕ ಹಳಿಯಾಳ, ಮಂಜುನಾಥ ಮಡಿವಾಳ, ಹಿರಿಯ ಶಿಕ್ಷಕ ಡಿ.ಎಲ್.ಭಾಗ್ವತ್,ಎಚ್.ಎಸ್.ನಾಯ್ಕ, ತಾಲೂಕು ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಕೆ.ಎನ್.ಹೆಗಡೆ, ನಾಗರಾಜ ನಾಯ್ಕ, ಎಂ.ಜಿ.ನಾಯ್ಕ ಹಾಗೂ ಹಳೆಯ ವಿದ್ಯಾರ್ಥಿಸಂಘದ ಪದಾಧಿಕಾರಿಗಳಿದ್ದರು.

ಇದೇ ಸಂದರ್ಭದಲ್ಲಿ ಶಾಲೆಗೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ಶ್ರೀಪಾದ ಹೆಗಡೆ ಬಕ್ಕೆಮನೆ ಅವರನ್ನು ಸನ್ಮಾನಿಸಲಾಯಿತು. ಸಿ.ಆರ್.ಪಿ.ಶೋಭಾ ಡಿ.ಸಿ. ಸ್ವಾಗತಿಸಿದರು. ಶಾಲಾ ಮುಖ್ಯಶಿಕ್ಷಕ ನಾಗರಾಜ ಮಡಿವಾಳ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ನಯನಾ ನಾಯ್ಕ ವಂದಿಸಿದರು. ವಿನಾಯಕ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.