ಲಿಂಗದಹಳ್ಳಿ: ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದ್ದು, ಶಾಲಾ ಶಿಕ್ಷಕರುಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಬೆಳೆಕಿಗೆ ತರಬೇಕು ಎಂದು ನಂದಿಬಟ್ಟಲು ಗ್ರಾಪಂ ಅಧ್ಯಕ್ಷ ಎ.ಅಬುಬಕರ್ ಕುಟ್ಟಿ ಹೇಳಿದರು.
ನಂದಿಬಟ್ಟಲು ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಬಳ್ಳಾವರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಗೆದ್ದ 13 ಶಾಲೆಗಳ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ಸರ್ಕಾರ ಇಂದು ಅನೇಕ ಸ್ಪರ್ಧೆ ನಡೆಸುತ್ತಿದ್ದು, ವಿದ್ಯಾರ್ಥಿಗಳು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ನಂದಿಬಟ್ಟಲು ಗ್ರಾಪಂ ಸದಸ್ಯ ಎ.ಕೃಷ್ಣನಾಯ್ಕ ಮಾತನಾಡಿ, ಇಂದು ಪ್ರತಿ ಗ್ರಾಮದಲ್ಲೂ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಿ ಹಿರಿಯ ಪ್ರಾಥಮಿಕ ಶಾಲೆಗಳ ವರೆಗೂ ಕಲಿಯಲು ಅವಕಾಶ ನೀಡಲಾಗಿದೆ. ಜತೆಗೆ ಸರ್ಕಾರದ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ಶೂ ಭಾಗ್ಯ, ಉಚಿತ ಪುಸ್ತಕ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿದೆ ಎಂದು ಹೇಳಿದರು.
ಮುಖ್ಯಶಿಕ್ಷಕಿ ಶಂಶದ್ ಬೇಗಂ, ಸಿಆರ್‌ಪಿ ಗಂಗಾಧರನಾಯ್ಕ, ಗ್ರಾಪಂ ಸದಸ್ಯರಾದ ಎನ್.ಜಿ ರಮೇಶ್, ಆರ್.ಮುರುಗ, ಸೌಮ್ಯ ಪುಷ್ಪಾಧರ್, ವಾಣಿ ರಾಜೇಶ್, ತುಂಗಾಬಾಯಿ, ನಿವೃತ್ತ ಕೃಷಿ ಅಧಿಕಾರಿ ಆರ್.ಸತ್ಯಪ್ಪ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಘು, ಶಿಕ್ಷಕರ ಸಂಘದ ಅಧ್ಯಕ್ಷ ಅನಂತಪ್ಪ ಇದ್ದರು.