ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳಲ್ಲಿ ಸಮಗ್ರವಾದ ವ್ಯಕ್ತಿತ್ವ ರೂಪುಗೊಳ್ಳಲು ಸಾಂಸ್ಕೃತಿಕ ಚಟುವಟಿಕೆಗಳು ಮುಖ್ಯ ಪಾತ್ರ ವಹಿಸುತ್ತವೆ. ಶಾಲಾ ಶಿಕ್ಷಣ ಇಲಾಖೆ ಪ್ರತಿವರ್ಷ ಸಂಘಟಿಸುವ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಮಕ್ಕಳಲ್ಲಿನ ಸುಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಉತ್ತಮ ವೇದಿಕೆಯಾಗಿದೆ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕಿ ಶಿವಲೀಲಾ ಕುಲಕರ್ಣಿ ಹೇಳಿದರು.
ನಗರದ ಮರಾಠಾ ವಿದ್ಯಾಪ್ರಸಾರಕ ಮಂಡಳದ ಭಾರತ ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಕ್ರಿಯಾಶೀಲವಾಗಿ ಭಾಗವಹಿಸಿ, ಪ್ರತಿಭೆಯನ್ನು ವ್ಯಕ್ತಪಡಿಸಬೇಕು. ಸಾಂಸ್ಕೃತಿಕ ಚಟುವಟಿಕೆಗಳು ಮಗುವಿನ ವ್ಯಕ್ತಿತ್ವ ವಿಕಸನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಲಾಖೆ ಹಾಗೂ ಸರ್ಕಾರದಿಂದ ವರ್ಷಪೂರ್ತಿ ಆಯೋಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳ ಸದುಪಯೋಗ ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ ಮಾತನಾಡಿ, ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯು ಮಗುವಿನಲ್ಲಿ ಅಡಗಿರುವ ಪ್ರತಿಭೆ ಹಾಗೂ ಸೃಜಲಶೀಲತೆಯನ್ನು ಪ್ರಸ್ತುತಪಡಿಸುವ ಕಾರ್ಯಕ್ರಮ ಎಂದರು.
ಮರಾಠಾ ವಿದ್ಯಾಪ್ರಸಾರಕ ಮಂಡಳಿಯ ಕಾರ್ಯದರ್ಶಿ ರಾಜು ಬಿರಜೆನವರ, ನಿರ್ದೇಶಕರಾದ ರಾಜು ಕಾಳೆ, ಸುನಿಲ ಮೋರೆ, ಸುಭಾಷ ಪವಾರ, ಶಿವಾಜಿ ಸೂರ್ಯವಂಶಿ ವೇದಿಕೆಯಲ್ಲಿದ್ದರು.
ಬಿಇಒ ಅಶೋ ಸಿಂದಗಿ, ಡಿಡಿಪಿಐ ಕಚೇರಿಯ ಜಿಲ್ಲಾ ಯೋಜನಾ ಉಪ ಸಮನ್ವಯಾಽಕಾರಿ ಎಸ್.ಎಂ. ಹುಡೇದಮನಿ, ವಿಷಯ ಪರೀಕ್ಷಕರಾದ ರೇಖಾ ಭಜಂತ್ರಿ, ಡಾ. ಗಿರಿಜಾ ಲಮಾಣಿ, ಡಾ. ಪ್ರಕಾಶ ಭೂತಾಳಿ, ಯಲ್ಲಪ್ಪ ಹುಬ್ಬಳ್ಳಿ, ಶಿಕ್ಷಕರಾದ ರಾಜಶೇಖರ ಹೊನ್ನಪ್ಪನವರ, ನಾರಾಯಣ ಭಜಂತ್ರಿ, ಬಿ.ವಿ. ಬಶೆಟ್ಟಿ, ಇತರರಿದ್ದರು.
ರೇಣುಕಾ ಇಂಗಳಕಿ ನಿರೂಪಿಸಿದರು. ಶಿಕ್ಷಣಾಽಕಾರಿ ನಫೀಸಬಾನು ದಾವಲಸಾಬನವರ ವಂದಿಸಿದರು.