ಜಿಲ್ಲೆ

ಪ್ರತಿಭಾನ್ವೇಷಣೆಗೆ ಪ್ರತಿಭಾ ಕಾರಂಜಿ ವೇದಿಕೆ

ಲಲಾಟಾಕ್ಷ ಎಸ್

ಸಾಲಿಗ್ರಾಮ: ವಿದ್ಯೆ ಕಲಿಸಿದ ಗುರುಗಳನ್ನು ವಿದ್ಯಾರ್ಥಿಗಳು ಎಂದಿಗೂ ಮರೆಯಬಾರದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾದೇವಮ್ಮ ತಿಳಿಸಿದರು.


ಸುಗ್ಗನಹಳ್ಳಿ ವಿಜೇತ ಇಂಟರ್‌ನ್ಯಾಷನಲ್ ವಿದ್ಯಾಸಂಸ್ಥೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಂದೆ, ತಾಯಿ ಸೇವೆ ಮಾಡುವ ಮೂಲಕ ಅವರ ಋಣ ತೀರಿಸಬಹುದು. ಆದರೆ, ವಿದ್ಯೆ ಕೊಟ್ಟ ಶಿಕ್ಷಕರ ಋಣ ಮಾತ್ರ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ ಜೀವನದಲ್ಲಿ ಗುರುಗಳನ್ನು ಮರೆಯಬಾರದು ಎಂದರು.


ಪ್ರಾಥಮಿಕ ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ಮುಖ್ಯವಾದದ್ದು. ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಲು ಇದು ವೇದಿಕೆಯಾಗಲಿದೆ. ಇಂತಹ ಕಾರ್ಯಕ್ರಮದಲ್ಲಿ ಎಲ್ಲ ಮಕ್ಕಳು ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಬೇಕು ಎಂದು ಹೇಳಿದರು.
ಗ್ರಾಪಂ ಮಾಜಿ ಅಧ್ಯಕ್ಷ ಡಿ.ವಿ.ಗುಡಿ ಯೋಗೇಶ್ ಮಾತನಾಡಿ, ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿದ ವಿದ್ಯಾಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು.


ವಿದ್ಯಾರ್ಥಿಗಳು ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತುಳಸಿರಾಮ್, ಉಪಾಧ್ಯಕ್ಷೆ ಮೀನಾಕ್ಷಿಬಾಯಿ, ಸಿಆರ್‌ಪಿ ಚಾರಿತ್ರ್ಯ, ನಿಕಟಪೂರ್ವ ಸಿಆರ್‌ಪಿ ಸುನೀಲ್, ಗ್ರಾಪಂ ಮಾಜಿ ಅಧ್ಯಕ್ಷ ರಾಮಚಂದ್ರ, ಸದಸ್ಯ ಮಲ್ಲಿಕಾರ್ಜುನ್, ಶೇಖರ್, ಸುಕನ್ಯಾ, ವಿಜೇತ ಇಂಟರ್‌ನ್ಯಾಷನಲ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಬೇಬಿ ಮಹೇಶ್ ಇತರರಿದ್ದರು.