ಗಜೇಂದ್ರಗಡ: ಮಕ್ಕಳಲ್ಲಿನ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿಯಂಥ ಸ್ಪರ್ಧೆಗಳು ಸಹಕಾರಿಯಾಗುತ್ತವೆ ಎಂದು ಕೊಡಗಾನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್ಡಿಎಂಸಿ ಅಧ್ಯಕ್ಷ ಹನುಮಂತಪ್ಪ ಕಲ್ಲಪ್ಪ ರಾಮಜಿ ಹೇಳಿದರು.
ಗದಗ ಜಿಪಂ, ಗಜೇಂದ್ರಗಡ ತಾಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ರೋಣ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಗೋಗೇರಿ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೋಗೇರಿ ಗಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಲಾವಕ್ಕಿ ಹಾಗೂ ರಾಂಪೂರ ಗ್ರಾಪಂ ಹುಲಿಗೆವ್ವ ಸಣ್ಣಕ್ಕಿ ಕಾರ್ಯಕ್ರಮ ಉದ್ಘಾಟಿಸಿದರು.
ಸಿಆರ್ಸಿ ಪ್ರಕಾಶ ಅಂಬೋರೆ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳು ಶಾಲಾ ಹಂತದಲ್ಲೇ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಅವರಲ್ಲಿ ದೃಢ ವಿಶ್ವಾಸ ಮೂಡಲು ನೆರವಾಗುತ್ತದೆ ಎಂದರು.
ಎಸ್ಡಿಎಂಸಿ ಉಪಾಧ್ಯಕ್ಷೆ ಪುಷ್ಪಾ ಸಾಲಿಮಠ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಪ್ರಭಾರಿ ಮುಖ್ಯ ಗುರು ಮಾತೆ ಸುವರ್ಣ ನರೇಗಲ್ಲಮಠ ಹಾಗೂ ಎಸ್ಡಿಎಂಸಿ ಸದಸ್ಯರು ಇದ್ದರು.
ಗೋಗೇರಿ ಕ್ಲಸ್ಟರ್ ಮಟ್ಟದ 13 ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ವಿವಿಧ ಕ್ಲಸ್ಟರ್ ಮಟ್ಟದ 20 ಜನ ಶಿಕ್ಷಕರು ನಿರ್ಣಾಯಕರಾಗಿ ಪಾಲ್ಗೊಂಡಿದ್ದರು.