ವಿಜಯವಾಣಿ ಸುದ್ದಿಜಾಲ ಮಧುರೆ
ಶಾಲಾ ಮಕ್ಕಳಲ್ಲಿರುವ ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದು ದೊಡ್ಡಬಳ್ಳಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸೈಹಿದಾ ಅನೀಸ್ ಹೇಳಿದರು.
ಹೋಬಳಿಯ ಹಾದ್ರಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ದೊಡ್ಡಬೆಳವಂಗಲ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಮಕ್ಕಳಲ್ಲಿ ಆರೋಗ್ಯಕರವಾದ ಸ್ಪರ್ಧಾ ಮನೋಭಾವನೆ ಮೂಡುತ್ತದೆ. ಮಕ್ಕಳು ಸ್ವತಂತ್ರವಾಗಿ ಯೋಚಿಸಿ ತಮ್ಮಲ್ಲಿರುವ ಪ್ರತಿಭಾ ಶಕ್ತಿಯನ್ನು ಹೊರಹೊಮ್ಮಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಸರ್ಕಾರಿ ಶಾಲೆಗಳಲ್ಲಿ ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಇಂಥ ಕಾರ್ಯಕ್ರಮಕ್ಕೆ ಸ್ಥಳೀಯ ಗ್ರಾಮಸ್ಥರು ದೊಡ್ಡಮಟ್ಟದಲ್ಲಿ ಸಹಕಾರ ನೀಡುತ್ತಿದ್ದಾರೆ ಅದೇ ರೀತಿ ಶಾಲಾ ಮಕ್ಕಳ ಪಾಲಕರು ಸಹಕಾರ ನೀಡುತ್ತಿದ್ದಾರೆ ಮಕ್ಕಳಿಗೆ ಬೇಕಾದ ಉಡುಗೆ ತೊಡುಗೆ ಸೇರಿ ಪ್ರದರ್ಶನಕ್ಕೆ ಪೂರ್ವಭಾವಿ ತರಬೇತಿ ದೊರಕಿಸಿಕೊಡುವಲ್ಲಿ ಆಸಕ್ತಿ ವಹಿಸುತ್ತಿದ್ದಾರೆ ಇದಕ್ಕೆ ನಮ್ಮ ಇಲಾಖೆ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಮಕ್ಕಳ ಪ್ರಗತಿಗೆ ಪೂರಕ: ಇಂಥ ಕಾರ್ಯಕ್ರಮ ಪ್ರತಿ ವರ್ಷ ಒಂದೊಂದು ಗ್ರಾಮದಲ್ಲಿ ನಡೆಯುವಂತಾಗಬೇಕು ಇದರಿಂದ ಗ್ರಾಮಸ್ಥರಿಗೂ ಸಮುದಾಯಕ್ಕೂ ಇಂತಹ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡುತ್ತದೆ ಇದರಿಂದ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಅನುಕೂಲವಾಗುತ್ತದೆ ಎಂದು ಕಾರ್ಯಕ್ರಮದಲ್ಲಿ ದೊಡ್ಡಬೆಳವಂಗಲ ಶಾಲೆಯ ಹಳೇ ವಿದ್ಯಾರ್ಥಿ ಗಳ ಸಂಘದ ಅಧ್ಯಕ್ಷ ಡಿ.ಸಿ. ಶಶಿಧರ್ ಹೇಳಿದರು.