ವಿಜಯವಾಣಿ ಸುದ್ದಿಜಾಲ ಮಧುರೆ
ಮಕ್ಕಳಲ್ಲಿ ಸ್ಪರ್ಧಾಮನೋಭಾವ ಬೆಳೆಯಲು ಶಿಕ್ಷಣ ಇಲಾಖೆ ಆರಂಭಿಸಿರುವ ಕಾರ್ಯಕ್ರಮಗಳು ಹೆಚ್ಚು ಸಹಕಾರಿಯಾಗಿವೆ ಎಂದು ಮಧುರೆ ಹೋಬಳಿಯ ಶಿಕ್ಷಣ ಸಂಯೋಜಕ ಆಂಜಿನಪ್ಪ ಹೇಳಿದರು.
ಕನ್ನಮಂಗಲದ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನಸವಾಡಿ ಕ್ಲಸ್ಟರ್ ಹಂತದ ಮಕ್ಕಳ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳು ಸ್ಪರ್ಧೆಗಳಲ್ಲಿ ಹೆಚ್ಚು ಆಸಕ್ತಿಯಿಂದ ಭಾಗವಹಿಸಿ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು ಹಾಗೆಯೇ ತೀರ್ಪುಗಾರರು ನಿಷ್ಪಕ್ಷಪಾತವಾಗಿ ತೀರ್ಪು ನೀಡಿ ಮಕ್ಕಳಿಗೆ ಉತ್ತೇಜನ ನೀಡಬೇಕು ಎಂದು ತಿಳಿಸಿದರು.
ತಾಪಂ ಮಾಜಿ ಅಧ್ಯಕ್ಷ ಲಕ್ಷ್ಮೀಪತಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಲ್ಲಿ ಅಪರೂಪ ಎನ್ನುವಂತ ಪ್ರತಿಭೆ ಇರುತ್ತದೆ ಇದನ್ನು ಗುರುತಿಸಿ ಅದನ್ನು ಬೆಳಕಿಗೆ ತರುವ ಕೆಲಸ ಮಾಡಬೇಕಿದೆ ಎಂದರು. ಮಕ್ಕಳು ಶಾಲೆಯ ಶಿಕ್ಷಣದ ಜತೆಗೆ ಕ್ರೀಡೆ ಸೇರಿ ಇನ್ನಿತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಸರ್ವಾಂಗೀಣವಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.
ವಿಜೇತರಿಗೆ ಬಹುಮಾನ: ಮಕ್ಕಳ ಛದ್ಮವೇಶ ಪ್ರದರ್ಶನ, ಭಕ್ತಿ ಗೀತೆ, ಮಿಮಿಕ್ರಿ, ದೇಶಭಕ್ತಿ ಗೀತೆಗಳು ಗಮನ ಸೆಳೆದವು, ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಕನಸವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಬಹುಮಾನ ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಭೂ ದಾನಿಗಳಾದ ಹನುಮಕ್ಕ ಅವರನ್ನು ಸನ್ಮಾನಿಸಲಾಯಿತು.