ಜಿಲ್ಲೆ

ವೈದ್ಯರೊಂದಿಗೆ ಅನುಚಿತ ವರ್ತನೆ - ಭಾರತೀಯ ವೈದ್ಯಕೀಯ ಸಂಘ, ಡಾಕ್ಟರ್‍ಸ್ ಫಾರಂನಿಂದ ಪ್ರತಿಭಟನೆ

Mangaluru - Nishantha Narayana

ಪುತ್ತೂರು: ಸರ್ಕಾರಿ ಆಸ್ಪತ್ರೆ ವೈದ್ಯರೊಂದಿಗೆ ಅನುಚಿತವಾಗಿ ವರ್ತಿಸಿ, ಹಲ್ಲೆಗೆ ಯತ್ನಿಸಿದವರನ್ನು ಬಂಽಸದ ವಿಚಾರದಲ್ಲಿ ಭಾರತೀಯ ವೈದ್ಯಕೀಯ ಸಂಘ, ಡಾಕ್ಟರ್‍ಸ್ ಫಾರಂ, ಆಯುಷ್ ಸಂಸ್ಥೆ, ಇಂಡಿಯನ್ ಡೆಂಟಲ್ ಅಸೋಸಿಯೇಶನ್ ನೇತೃತ್ವದಲ್ಲಿ ಬಿಜೆಪಿ ಮತ್ತು ವಿವಿಧ ಹಿಂದುಪರ ಸಂಘಟನೆಗಳು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದೆ.

ಆರೋಪಿಯನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ ಎಂದು ಆರೋಪಿಸಿ, ಶುಕ್ರವಾರ ರಾತ್ರಿ ಒಂದಷ್ಟು ಮಂದಿ ಠಾಣೆಯ ಮುಂದೆ ಜಮಾಯಿಸಿದ್ದರು. ಶನಿವಾರ ಪುತ್ತೂರು ಮಹಿಳಾ ಪೊಲೀಸ್ ಠಾಣೆ ಮುಂಭಾಗದಲ್ಲಿ ಜಮಾಯಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ವೈದ್ಯರ ಸಂಘ ಮತ್ತು ಪೊಲೀಸರ ನಡುವೆ ಮಾತುಕತೆ ನಡೆದಿದೆ. ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾಕಾರರು ರಸ್ತೆ ತಡೆಗೆ ಮುಂದಾಗಿದ್ದು, ಪೊಲೀಸರು ಮನವೊಲಿಸಲು ಪ್ರಯತ್ನಿಸಿದರೂ ಜಗ್ಗದೆ ಸುಮಾರು ಅರ್ಧ ಗಂಟೆ ರಸ್ತೆ ತಡೆ ನಡೆಸಿದರು.

ಸ್ಥಳಕ್ಕೆ ಆಗಮಿಸಿದ ಶಾಸಕ ಅಶೋಕ್ ಕುಮಾರ್ ರೈ ಪೊಲೀಸರು ಮತ್ತು ಪ್ರತಿಭಟನಾಕಾರೊಂದಿಗೆ ಮಾತುಕತೆ ನಡೆಸಿದರು. ಸಂಜೆ ೬ ಗಂಟೆ ಒಳಗೆ ಆರೋಪಿಗಳನ್ನು ಬಂಽಸುವ ಭರವಸೆ ನೀಡಿ, ಪ್ರಕರಣದಲ್ಲಿ ಪೊಲೀಸರು ತಪ್ಪು ಎಸಗಿದ್ದಲ್ಲಿ ಅವರ ವಿರುದ್ಧವೂ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಐಎಂಎ ಸೂಚನೆಯಂತೆ ಶನಿವಾರ ಪುತ್ತೂರಿನಲ್ಲಿ ಖಾಸಗಿ ಮತ್ತು ಸರ್ಕಾರಿ ವೈದ್ಯರು ಯಾವುದೇ ಸೇವೆ ನೀಡದೆ ಪ್ರತಿಭಟನೆ ನಡೆಸಿದ್ದು, ಹೊರರೋಗಿಗಳಿಗೆ ಯಾವುದೇ ಚಿಕಿತ್ಸೆ ಲಭಿಸಿರಲಿಲ್ಲ.

ಆಸ್ಪತ್ರೆಯಲ್ಲಿ ಏನಾಗಿತ್ತು?

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೀರಮಂಗಲ ನಿವಾಸಿ ಅಜೀಮ್ ಕೈಮರ್ ಪತ್ನಿ ಝರೀನಾ ಹೆರಿಗೆಯಾಗಿದ್ದು, ವಾರ್ಡ್‌ಗೆ ವರ್ಗಾವಣೆಯಾಗಿದ್ದರು. ಶುಕ್ರವಾರ ಮಧ್ಯಾಹ್ನ ಜೋಹರಾ ಮತ್ತು ಅವರ ಪುತ್ರ ಸಮದ್ ವಾರ್ಡ್‌ನಲ್ಲಿದ್ದ ಝರೀನಾ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದಿದ್ದಾರೆ. ಬಾಣಂತಿಯ ಸಮೀಪದಲ್ಲಿ ಕುಳಿತ ಕಾರಣಕ್ಕೆ ವೈದ್ಯರು ಕೆಂಡಾಂಡಲವಾಗಿದ್ದಾರೆಂಬ ಮಾಹಿತಿಯಿದೆ. ಇದನ್ನು ರೋಗಿಯ ಕಡೆಯವರು ವಿಡಿಯೋ ಚಿತ್ರೀಕರಣ ನಡೆಸಿದ್ದಾರೆ. ಭೇಟಿಯ ಸಮಯವಲ್ಲ ಎಂದಿದ್ದಕ್ಕೆ, ಫಲಕ ಅಳವಡಿಸಬೇಕಿತ್ತು ಎಂದು ಹೇಳಿ ಜೋಹರಾ ವೈದ್ಯರ ಜತೆಗೆ ವಾಗ್ವಾದ ನಡೆಸಿದ್ದಾರೆ. ಅವರ ಪುತ್ರ ಅನುಚಿತ ವರ್ತನೆ ನಡೆಸಿದ್ದಾರೆಂದು ಡಾ.ಆಶಾಜ್ಯೋತಿ ದೂರಿನಲ್ಲಿ ತಿಳಿಸಲಾಗಿದೆ. ಪುತ್ತೂರು ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನು ಶುಕ್ರವಾರ ಸಾಯಂಕಾಲ ಕರೆಸಿಕೊಂಡು ಮುಚ್ಚಳಿಕೆ ಬರೆಸಿ ಕಳುಹಿಸಿದ್ದರು.