ವಿಟ್ಲ: ಮಾಣಿಲ ಗ್ರಾಮದಲ್ಲಿ ಇತ್ತೀಚೆಗೆ ನಡೆದ ದಲಿತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಭೂಮಾಲೀಕ ಮಹೇಶ್ ಭಟ್‌ನನ್ನು ತಕ್ಷಣ ಬಂಽಸಲು ಒತ್ತಾಯಿಸಿ, ಪ್ರಕರಣದ ಸಮಗ್ರ ತನಿಖೆ ನಡೆಸಲು ಹಾಗೂ ಕಠಿಣ ಕಾಯ್ದೆಗಳಡಿ ಪ್ರಕರಣ ದಾಖಲಿಸಲು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಹಾಗೂ ವಿವಿಧ ದಲಿತ ಮತ್ತು ಸಮಾನ ಮನಸ್ಕ ಸಂಘಟನೆಗಳು ಇದರ ಸಹಭಾಗಿತ್ವದಲ್ಲಿ ವಿಟ್ಲದಲ್ಲಿ ಪ್ರತಿಭಟನಾ ಸಭೆ ನಡೆಯಿತು.
ವಿಟ್ಲ ಹಳೆ ಬಸ್ ನಿಲ್ದಾಣದಿಂದ ಹೊರಟ ಪ್ರತಿಭಟನಾ ಮೆರವಣಿಗೆ ವಿಟ್ಲದ ಮುಖ್ಯ ರಸ್ತೆಯಲ್ಲಿ ಸಂಚರಿಸಿ, ನಾಡಕಚೇರಿ ಬಳಿ ಪ್ರತಿಭಟನಾ ಸಭೆ ನಡೆಯಿತು. ವಿಟ್ಲ ಉಪತಹಸೀಲ್ದಾರ್ ನವೀನ್ ಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ದಲಿತ ಹಕ್ಕುಗಳ ರಾಜ್ಯ ಸಮಿತಿ ಸದಸ್ಯೆ ಈಶ್ವರಿ ಪದ್ಮುಂಜ ಮಾತನಾಡಿ, ಬಾಲಕಿ ದೌರ್ಜನ್ಯ ಪ್ರಕರಣವನ್ನು ಪೊಲೀಸರು ಮರೆಮಾಚಿದ್ದಾರೆ. ಹೆತ್ತವರಿಗೆ ಕೊಲೆ ಬೆದರಿಕೆ ಬಂದರೂ ಪೊಲೀಸರು ಮೌನವಾಗಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ತಮ್ಮ ಮಕ್ಕಳ ಮೇಲೆ ಈ ರೀತಿಯ ದೌರ್ಜನ್ಯವಾದರೆ ಪೊಲೀಸರು ಈ ರೀತಿಯಾಗಿ ವರ್ತಿಸುತ್ತಿದ್ದರಾ? ಎಂದು ಪ್ರಶ್ನಿಸಿದರು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಬಾಲಕಿ ಮೇಲೆ ಕೇವಲ ಲೈಂಗಿಕ ಕಿರುಕುಳ ಮಾತ್ರ ನಡೆದಿಲ್ಲ. ಅತ್ಯಾಚಾರ ನಡೆದಿರುವ ಶಂಕೆ ಇದೆ. ಆರೋಪಿಯನ್ನು ಪತ್ತೆ ಹಚ್ಚಲು ಸಾಧ್ಯವಾಗದಿದ್ದರೆ, ವಿಟ್ಲ ಪೊಲೀಸರು ಖಾಕಿ ಕಳಚಿ ಭೂ ಮಾಲೀಕನ ತೋಟದಲ್ಲಿ ಕೂಲಿ ಕೆಲಸ ಮಾಡಲಿ. ಘಟನೆಯ ಸತ್ಯಾಸತ್ಯತೆಯನ್ನು ಹೊರತರದಿದ್ದರೆ ಮುಂದೆ ಎಸ್ಪಿ ಚಲೋ ಕಚೇರಿ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಮುಖಂಡ ದಿನೇಶ್ ಮೂಳೂರು, ಕಾರ್ಮಿಕ ಮುಖಂಡರಾದ ಬಿ.ಎಂ ಭಟ್, ಶೇಖರ, ರೈತ ಮುಖಂಡರಾದ ಕೆ.ಯಾದವ ಶೆಟ್ಟಿ, ಮಂಜುಳಾ ನಾಯಕ್, ಅಶೋಕ್ ಕೊಂಚಾಡಿ, ಬಿ.ಕೆ ಇಮ್ತಿಯಾಜ್, ಸದಾಶಿವ ಪಡುಬಿದ್ರೆ, ಸರೋಜಿನಿ, ದಿನೇಶ್, ಎಸ್.ಪಿ ಆನಂದ್, ಸೇಸಪ್ಪ ಬೆದ್ರಕಾಡು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ದಲಿತ ಮುಖಂಡರಾದ ಚಂದ್ರಶೇಖರ್ ಕಿನ್ಯಾ, ವಿಶ್ವನಾಥ ಮಂಜನಾಡಿ, ಪುಷ್ಪರಾಜ್ ಮಾಣಿಲ, ಸುರೇಶ್, ಚಂದಪ್ಪ, ರಾಧಾಕೃಷ್ಣ ಬೊಂಡಂತಿಲ, ಕಮಲಾಕ್ಷ ಬಜಾಲ್, ರಾಘವೇಂದ್ರ ಪಡ್ಪು, ಶೀನ ಕನ್ಯಾನ, ರಾಮಪ್ಪ ಮಂಜೇಶ್ವರ, ಗಂಗಾಧರ ಗೋಲಿಯಡ್ಕ, ವಿಜಯ ಮೂಡುಬಿದಿರೆ, ಡಿವೈಎಫ್‌ಐ ಮುಖಂಡರಾದ ರಿಜ್ವಾನ್ ಹರೇಕಳ, ಜಗದೀಶ್ ಬಜಾಲ್, ನವೀನ್ ಕೊಂಚಾಡಿ, ರಝಾಕ್ ಮುಡಿಪು, ಅಸುಂತ ಡಿಸೋಜ, ಪ್ರಮಿಳಾ ಶಕ್ತಿನಗರ, ಸುನಿತಾ ತಣ್ಣೀರುಬಾವಿ, ಜೆಸಿಂತಾ ಜೋಕಟ್ಟೆ, ಅಭಿಷೇಕ್ ಬೆಳ್ತಂಗಡಿ, ಯೋಗಿತಾ ಕಾರ್ಮಿಕ ಮುಖಂಡರಾದ ಸುಕುಮಾರ್ ತೊಕ್ಕೊಟ್ಟು, ರಮೇಶ್, ಯೋಗೀಶ್ ಜಪ್ಪಿನಮೊಗರು, ಸಂತ್ರಸ್ತ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ದಲಿತ ಹಕ್ಕುಗಳ ಸಮಿತಿಯ ಅಧ್ಯಕ್ಷ ಕೃಷ್ಣಪ್ಪ ಕೊಣಾಜೆ ಸ್ವಾಗತಿಸಿದರು. ಕೃಷ್ಣ ತಣ್ಣೀರುಬಾವಿ ವಂದಿಸಿದರು.