ಜಿಲ್ಲೆ

ಮಕ್ಕಳ ಪ್ರತಿಭೆ ಗುರುತಿಸುವ ಹೊಣೆ ಶಿಕ್ಷಕರದ್ದು

ತುಮಕೂರು: ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸುವುದು ನಿಜವಾದ ಶಿಕ್ಷಕನ ಕರ್ತವ್ಯ. ಈ ನಿಟ್ಟಿನಲ್ಲಿ ಶಿಕ್ಷಕರು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಡಯಟ್​ ಪ್ರಾಚಾರ್ಯ ಕೆ.ಮಂಜುನಾಥ್​ ಹೇಳಿದರು.

ನಗರದ ಉತ್ತರ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಉತ್ತರ ಬಡಾವಣೆ ಕ್ಲಸ್ಟರ್​ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದವರೆಗೆ ನಡೆಯುವ ಕಾರ್ಯಕ್ರಮ. ಹಾಗಾಗಿ, ಮಕ್ಕಳಲ್ಲಿನ ಸುಪ್ತ ಪ್ರತಿಭೆಗೆ ವೇದಿಕೆ ನೀಡಿದರೆ ನಿಮ್ಮ ಶಾಲೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ಶಿಕ್ಷಕರು ಶಕ್ತಿ ಮೀರಿ ಪ್ರಯತ್ನಿಸುವಂತೆ ಸಲಹೆಯಿತ್ತರು.

2016ರಲ್ಲಿ ಸಿದ್ದಗಂಗಾ ಮಠದಲ್ಲಿ ನಡೆದ ರಾಜ್ಯಮಟ್ಟದ ಕಲೋತ್ಸವದಲ್ಲಿ ಪ್ರಥಮ ಬಹುಮಾನ ಪಡೆದ ನಾಟಕವು ಅದೇ ವರ್ಷ ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಕಲೋತ್ಸವದಲ್ಲಿಯೂ ಪ್ರಥಮ ಸ್ಥಾನ ಪಡೆಯಿತು.ತೀರ್ಪು ಎಲ್ಲರೂ ಒಪ್ಪಿಕೊಳ್ಳುವಂತಿರಬೇಕು. ಪ್ರತಿಭಾ ಕಾರಂಜಿ,ಕಲೋತ್ಸವಗಳಲ್ಲಿ ಭಾಗವಹಿಸುವ ಮಕ್ಕಳು, ನಮ್ಮ ಮಕ್ಕಳೇ ಆಗಿರುವುದರಿಂದ ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ತೀರ್ಪುಗಾರರು ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದರು.

ಉತ್ತರ ಬಡಾವಣೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪದವಿಧರ ಮುಖ್ಯ ಶಿಕ್ಷಕ ಡಿ.ಎಸ್​.ಶಿವಸ್ವಾಮಿ, ನಮ್ಮ ಶಾಲೆಯಲ್ಲಿ 2024-&25ನೇ ಸಾಲಿನ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಆಯೋಜಿಸಲಾಗಿದೆ. ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದೊಂದು ಒಳ್ಳೆಯ ವೇದಿಕೆ. ಸರ್ಕಾರ ಮತ್ತು ಇಲಾಖೆಯ ಸೂಕ್ತ ಮಾರ್ಗದರ್ಶನದೊಂದಿಗೆ ಕ್ಲಸ್ಟರ್​ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.

ಉತ್ತರ ಬಡಾವಣೆ ಶಾಲೆಯ ಎಸ್​ಡಿಎಂಸಿ ಅಧ್ಯಕ್ಷ ಟಿ.ಓಬಳಯ್ಯ ಅಧ್ಯಕ್ಷತೆವಹಿಸಿದ್ದರು. ಡಯಟ್​ ಉಪನ್ಯಾಸಕರಾದ ನಂಜುಂಡಯ್ಯ,ರಂಗರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಜಿ.ತಿಮ್ಮೇಗೌಡ, ಕಾಳಿದಾಸ ಪಿಯು ಕಾಲೇಜಿನ ಉಪಪ್ರಾಂಶುಪಾಲ ಚಂದ್ರಶೇಖರ್​, ಸಿಆರ್​ಪಿ ಸೈಯದ್​ ಮೆಹಬೂಬ್​ ಷಾಪ, ಶಿಕ್ಷಕಿ ಕೆ.ಸಿ.ಯಮುನಾ ಮತ್ತಿತರರು ಉಪಸ್ಥಿತರಿದ್ದರು.

ನೀರಿಗೆ ಬಣ್ಣವಿಲ್ಲ, ಆಕಾರವಿಲ್ಲ. ಯಾವ ಪಾತ್ರಗೆ ಹಾಕಿದರೂ ಅದರ ಬಣ್ಣ ಮತ್ತು ಆಕಾರವನ್ನು ಪಡೆದುಕೊಳ್ಳುತ್ತದೆ. ಮಕ್ಕಳ ಮನಸ್ಸು ಸಹ ನೀರಿನಂತೆ. ಅವರನ್ನು ತಿದ್ದಿ, ತೀಡಿ ಒಳ್ಳೆಯ ಬಣ್ಣ, ಆಕಾರ ನೀಡುವುದು ಶಿಕ್ಷಕರ ಗುರುತರ ಜವಾಬ್ದಾರಿ, ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸುವುದು ನಿಜವಾದ ಶಿಕ್ಷಕನ ಕರ್ತವ್ಯ. ಕೆ.ಮಂಜುನಾಥ್​ ಡಯಟ್​ ಪ್ರಾಚಾರ್ಯ