ಜಿಲ್ಲೆ

ಮಕ್ಕಳಲ್ಲಿ ಸೃಜನಾತ್ಮಕ ಪ್ರತಿಭೆ ಬೆಳೆಸಿ: ಶಾಸಕ ರವಿಕುಮಾರ್ ಗಣಿಗ ಕಿವಿಮಾತು

ಕೆ.ಎನ್.ರಾಘವೇಂದ್ರ

ಮಂಡ್ಯ: ಮಕ್ಕಳಲ್ಲಿ ಸೃಜನಾತ್ಮಕ ಪ್ರತಿಭೆ ಬೆಳೆಸುವುದು ಹಾಗೂ ಅನಾವರಣಗೊಳಿಸುವುದು ಶಿಕ್ಷಕರ ಕರ್ತವ್ಯ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ನಗರದ ಗ್ಲೋಬಲ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಆಯೋಜಿಸಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಅಡಗಿರುವ ಸೃಜನಾತ್ಮಕ ಪ್ರತಿಭೆಯನ್ನು ಹೊರ ತರುವಲ್ಲಿ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸಾಂಸ್ಕೃತಿಕ ಸ್ಪರ್ಧೆಗಳು ಪೂರಕವಾಗಿದೆ ಎಂದರು.

ಇಂದು ಎಲ್ಲೆಡೆ ಸ್ಪರ್ಧೆ ಹೆಚ್ಚಿದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಸಜ್ಜುಗೊಳಿಸಲು ಕೇವಲ ಬೌದ್ದಿಕ ಓದು ಬರಹ ಮಾತ್ರ ಸಾಲದು. ಅದರೊಂದಿಗೆ ಸೃಜನಶೀಲತೆ ಬೆಳಸುವ ಸಹಪಠ್ಯ ಸ್ಪರ್ಧೆಗಳು ಅಗತ್ಯವಾಗಿದೆ. ಈ ದಿಸೆಯಲ್ಲಿ ಶಿಕ್ಷಕರು ಹೆಚ್ಚು ಕಾರ್ಯಶೀಲರಾಗಿ ಮಕ್ಕಳಲ್ಲಿ ಸೃಜನಾತ್ಮಕ ಪ್ರತಿಭೆಯನ್ನು ಗುರುತಿಸಿ ಅವರನ್ನು ಉತ್ತಮ ಪ್ರತಿಭೆಗಳನ್ನಾಗಿ ಅರಳಿಸಲು ಹೆಚ್ಚಿನ ಗಮನ ಹರಿಸಬೇಕೆಂದು ಅವರು ಸಲಹೆ ನೀಡಿದರು.

ಡಯಟ್ ಪ್ರಾಂಶುಪಾಲ ಪುರುಷೋತ್ತಮ ಮಾತನಾಡಿ, ಮಗುವಿನಲ್ಲಿರುವ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಹಕಾರಿಯಾಗಿದೆ. ತೀರ್ಪುಗಾರರು ಪಾರದರ್ಶಕವಾದ ತೀರ್ಪು ನೀಡುವ ಮೂಲಕ ಉತ್ತಮ ಪ್ರತಿಭೆಗಳನ್ನು ಆಯ್ಕೆಗೊಳಿಸಬೇಕೆಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ಲೋಬಲ್ ಪಬ್ಲಿಕ್ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ನರೇಂದ್ರಬಾಬು, ಕ್ಷೇತ್ರ ಸಮನ್ವಯಾಧಿಕಾರಿ ಎನ್.ಉಮೇಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್.ದೇವರಾಜು, ಮುಖ್ಯ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ನಾಗರಾಜು, ತಾಲೂಕು ಅಧ್ಯಕ್ಷ ಮಂಗಲ ಶಿವಣ್ಣ, ಕಾರ್ಯದರ್ಶಿ ಶಿವಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ರವಿಶಂಕರ್, ತಾಲೂಕು ಅಧ್ಯಕ್ಷ ನಂದೀಶ್, ಕಾರ್ಯದರ್ಶಿ ಚಂದ್ರಶೇಖರ್, ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಲಿಂಗರಾಜು, ಪದಾಧಿಕಾರಿಗಳಾದ ನಾಗರಾಜು, ದೇವರಾಜು, ರವಿಶಂಕರ್, ಶಿಕ್ಷಣ ಸಂಯೋಜಕರಾದ ಚೈತನ್ಯಮೂರ್ತಿ, ಮಧುಸೂದನ್, ಸ್ವಾಮಿ, ಶಶಿಧರ್ ಇತರರಿದ್ದರು.