ಪಿರಿಯಾಪಟ್ಟಣದ ಪುಷ್ಪ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ವಿವಿಧ ವೇಷಧಾರಿಗಳಾಗಿದ್ದ ವಿದ್ಯಾರ್ಥಿಗಳನ್ನು ಬಿಇಒ ಬಸವರಾಜು ಅಭಿನಂದಿಸಿದರು. ಪ್ರಶಾಂತ್, ಶಿವರಾಜ್, ಗಣೇಶ್ ಇತರರು ಇದ್ದರು. 
ಜಿಲ್ಲೆ

ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸಹಕಾರಿ

ಪಿರಿಯಾಪಟ್ಟಣ: ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭೆಯನ್ನು ಹೊರತರಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಅಭಿಪ್ರಾಯಪಟ್ಟರು.

ಪಟ್ಟಣದ ಪುಷ್ಪ ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಾಗ ಕೌಶಲ್ಯಾಭಿವೃದ್ಧಿ ಜತೆಗೆ ಮಾನಸಿಕ ಸ್ಥಿರತೆಯು ಲಭಿಸಲಿದೆ ಎಂದರು.

ಮಕ್ಕಳಲ್ಲಿರುವ ವಿಶೇಷ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆ ಮತ್ತು ಕ್ರಿಯಾಶೀಲತೆ ಬೆಳೆಸಲು ಕಾರ್ಯಕ್ರಮ ಸಹಕಾರಿಯಾಗಲಿದ್ದು, ಪ್ರತಿ ವರ್ಷ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಶಾಂತ್ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವದ ಅಭಿವೃದ್ಧಿಗೆ ಸಾಂಸ್ಕೃತಿಕ ಚಟುವಟಿಕೆಗಳು ಉಪಯುಕ್ತವಾಗಿವೆ. ಮಕ್ಕಳಲ್ಲಿ ಶೈಕ್ಷಣಿಕ ಪ್ರಗತಿ, ಮನರಂಜನೆ ಮತ್ತು ಚೇತೋಹಾರಿ ಬೆಳವಣಿಗೆಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ಒಂದು ಉತ್ತಮ ವೇದಿಕೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಶಾಲೆಗಳಿಂದ ಬಂದಿದ್ದ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಈ ಸಂದರ್ಭದಲ್ಲಿ ಬಿಆರ್‌ಸಿಗಳಾದ ಶಿವರಾಜ್, ಗಣೇಶ್, ಸತೀಶ್, ಬಿಆರ್‌ಪಿ ಶ್ರೀನಿಧಿ, ಟೌನ್ ಕ್ಲಸ್ಟರ್ ವ್ಯಾಪ್ತಿಯ ಸಿಆರ್‌ಪಿ ರವಿಕುಮಾರ್, ಬಿಐಆರ್‌ಟಿ ಪುಟ್ಟರಾಜು ಇತರರು ಇದ್ದರು.