ಹುಣಸೂರು: ಯುವತಿಯರು ಮೊಬೈಲ್ ಅತಿಯಾದ ಬಳಕೆಯನ್ನು ತ್ಯಜಿಸಿ, ಜ್ಞಾನ ಸಂಪಾದನೆಯ ಮಾರ್ಗ ಮತ್ತು ಕ್ರಿಯಾಶೀಲ ಚಟುವಟಿಕೆಯತ್ತ ಹೆಚ್ಚಿನ ಗಮನಹರಿಸಬೇಕೆಂದು ವಕೀಲೆ ಆಫಿಯಾ ಕೌಸರ್ ಸಲಹೆ ನೀಡಿದರು.
ನಗರದ ಜಮಾತೆ ಇಸ್ಲಾಮಿ ಹಿಂದ್ ಕಚೇರಿಯಲ್ಲಿ ಬುಧವಾರ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅತಿಯಾದ ಮೊಬೈಲ್ ಬಳಕೆ ದುರಂತ ಜೀವನಕ್ಕೆ ನಾಂದಿಯಾಗುತ್ತಿದೆ. ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್‌ನಂತಹ ಸಂಘಟನೆಗಳು ಯುವತಿಯರಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರುವತ್ತ ಕಾರ್ಯಪ್ರವೃತ್ತವಾಗಿದೆ. ಇಂತಹ ಸಂಘಟನೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿರಿ. ಜ್ಞಾನ ಸಂಪಾದನೆಯಿಂದ ನಮ್ಮ ಜೀವನದ ಉದ್ದೇಶವೂ ತಿಳಿಯುತ್ತದೆ. ಈ ಮುಖಾಂತರ ನಮ್ಮ ಪ್ರತಿಭೆ ಅನಾವರಣಕ್ಕೆ ಸಹಕಾರವಾಗುತ್ತದೆ ಎಂದರು.
ನಗರದ ಉರ್ದು ಶಾಲೆಯ ಮುಖ್ಯಶಿಕ್ಷಕಿ ಫಜೀಲಾ ಬಾನು ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಮುಸ್ಲಿಂ ಸಮುದಾಯದ ಯುವತಿಯರು ಶಿಕ್ಷಣ ಪಡೆಯುವ ಕುರಿತು ಹೆಚ್ಚು ಆಸಕ್ತಿ ವಹಿಸಬೇಕು. ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಶಿಕ್ಷಿತರಾಗುವುದೊಂದೇ ಮಾರ್ಗ ಎಂದರು.
ಜಮಾತೆ ಇಸ್ಲಾಮಿ ಹಿಂದ್ ಮಹಿಳಾ ಘಟಕದ ಅಧ್ಯಕ್ಷೆ ಸೈಯದ್ ವರೂಜ್ ಫಾತಿಮಾ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಜಡೆ ಹಾಕುವ, ಫೋಟೋಗ್ರಫಿ, ಅಡುಗೆ ಮನೆಯಲ್ಲಿ ಆಗಬಹುದಾದ ಅನಾಹುತಗಳ ನಿವಾರಣೆ ಹೇಗೆ ಎಂಬಿತ್ಯಾದಿಗಳ ಕುರಿತು ಮಾಹಿತಿ ನೀಡಲಾಯಿತು.
ವಿದ್ಯಾರ್ಥಿನಿಯರು ಮೆಹಂದಿ ಹಾಕುವ ಸ್ಪರ್ಧೆ, ಹಾಡು, ಕವಿತೆ, ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಆರ್ಗನೈಸೇಷನ್‌ನ ಪಿಎಂ ಜಶಿಲಾ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.