ಜಿಲ್ಲೆ

ಸರ್ಕಾರಕ್ಕೆ ಪರ್ಯಾಯವಾಗಿ ಮಕ್ಕಳಿಗೆ ಶಿಕ್ಷಣ: ರಾಷ್ಟ್ರೀಯ ಕಾರ್ಯದರ್ಶಿ ಎಚ್.ಎಂ.ರೇಣುಕಾ ಪ್ರಸನ್ನ ಹೇಳಿಕೆ

ಮಂಡ್ಯ: ನಿನ್ನೆ, ಮೊನ್ನೆ ಹುಟ್ಟಿಕೊಂಡ ಸಂಘ ಸಂಸ್ಥೆಗಳಿಗೆ ನೂರಾರು ಎಕರೆ ಜಾಗವನ್ನು ಕೊಡುತ್ತಿರುವ ಸರ್ಕಾರ ಯಾವ ಮಾನದಂಡಗಳನ್ನು ಇಟ್ಟುಕೊಂಡು ಭೂಮಿಯನ್ನು ನೀಡುತ್ತಿದೆ. ಸರ್ಕಾರಕ್ಕೆ ಪರ್ಯಾಯವಾಗಿ ಶಿಕ್ಷಣವನ್ನು ನೀಡಿದೆ ಎಂದರೆ ಅದು ವೀರಶೈವ ಸಮಾಜ ಮಾತ್ರ. ಮಠ ಮಾನ್ಯಗಳಲ್ಲಿ ಯಾವುದೇ ಜಾತಿ ಎನ್ನದೇ ಶಿಕ್ಷಣವನ್ನು ನೀಡಿರುವ ಹೆಮ್ಮೆಯಿದೆ. ಅಂತಹದ್ದನ್ನೇ ನಿರ್ಲಕ್ಷ್ಯ ಮಾಡುವ ಪ್ರಕ್ರಿಯೆ ಸರಿಯೇ ಎಂದು ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಎಚ್.ಎಂ.ರೇಣುಕಾ ಪ್ರಸನ್ನ ಪ್ರಶ್ನಿಸಿದರು.

ನಗರದ ಕರ್ನಾಟಕ ಸಂಘದ ಆವರಣದಲ್ಲಿ ಮಹಾಸಭಾದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಭಾ ಪುರಸ್ಕಾರಕ್ಕಾಗಿ 1 ಕೋಟಿ ರೂ. ಗೂ ಹೆಚ್ಚು ಹಣ ಖರ್ಚು ಮಾಡಿ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಸಮಾಜದ ಉತ್ತರಾಧಿಕಾರಿಯಾಗಿ ಕಾಣುತ್ತಾರೆ. ಅವರ ಪ್ರತಿಭೆಗೆ ಗೌರವ ಸಿಗುವ ಕೆಲಸವನ್ನು ಮಾಡಲಾಗುತ್ತಿದೆ. ವೀರಶೈವ ಮಕ್ಕಳಿಗಾಗಿ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ರಾಜ್ಯದ ಆಯಾ ಜಿಲ್ಲಾ ಘಟಕದಲ್ಲಿಯೇ ಮಾಡಿ ನೆರವಾಗುತ್ತಿದ್ದೇವೆ. ಇದರಿಂದ ಮಕ್ಕಳಿಗೆ ನೆರವಾಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಸರ್ವೇ ಮಾಡಿ ಅವರಿಗೆ ಪ್ರೋತ್ಸಾಹ ಸಿಗುವಂತೆ ಮಾಡಬೇಕು. ಐಎಎಸ್ ಮತ್ತು ಕೆಎಎಸ್ ಮಾಡಬೇಕೆನ್ನುವ ಆಸೆಯಿಟ್ಟುಕೊಂಡಿರುವವರಿಗೆ ಮಾರ್ಗದರ್ಶನ ತೋರಿಸುವ ಕೆಲಸವಾಗಬೇಕು. ನಮ್ಮ ಮಹಾಸಭಾದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳುವುದು ಮುಖ್ಯವಾಗಬೇಕು. ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದರು.

ಶ್ರೀರಾಮಯೋಗೀಶ್ವರ ಮಠದ ಶಿವಬಸವಸ್ವಾಮೀಜಿ, ಮಹಾಸಭಾ ಅಧ್ಯಕ್ಷ ಎಂ.ಸುಬ್ರಮಣ್ಯ, ತಾಲೂಕು ಘಟಕದ ಅಧ್ಯಕ್ಷ ವಿ.ಎಸ್.ಧನಂಜಯಕುಮಾರ್, ಡಿ.ಪ್ರಕಾಶ್, ಶಿವಾನಂದ, ಮಲ್ಲಿಕಾರ್ಜುನ, ನಿರಂಜನ್‌ಬಾಬು, ನಾಗರಾಜು ಇತರರಿದ್ದರು. ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.