ಜಿಲ್ಲೆ

ಯದುವೀರ್ ಬಿಜೆಪಿ ಕಾರ್ಯಕರ್ತರ ಕೈಗೆ ಸಿಗುವ ವ್ಯಕ್ತಿಯಲ್ಲ ಎಂಬ ಸಂದೇಶ ನೀಡಿದ ಪ್ರತಾಪ್ ಸಿಂಹ

ಸದೇಶ್ ಕಾರ್ಮಾಡ್

ಮೈಸೂರು: ನಿಮ್ಮ ಮನೆ ಬಾಗಿಲು ಕಾಯುವ ಸಂಸದರು ನಿಮಗೆ ಬೇಕೇ ಹೊರತು ನೀವು ಸಂಸದರ ಮನೆ ಬಾಗಿಲು ಕಾಯುವ ಪರಿಸ್ಥಿತಿ ಬರಬಾರದು ಎಂದು ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಪರೋಕ್ಷ ವಾಗಿ ವಾಗ್ದಾಳಿ ನಡೆಸಿದ್ದಾರೆ.

ನಗರದ ಬೋಗಾದಿ ವರ್ತುಲ ರಸ್ತೆಯ ಜಿಎಲ್‌ಎನ್ ಕನ್ವೆನ್ಷನ್ ಹಾಲ್‌ನಲ್ಲಿ ಮಂಗಳವಾರ ಬಿಜೆಪಿ ಹಮ್ಮಿಕೊಂಡಿದ್ದ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ನಿರ್ವಹಣಾ ಸಮಿತಿ ಸಭೆಯಲ್ಲಿ ಯದುವೀರ್ ಹೆಸರು ಪ್ರಸ್ತಾಪಿಸದೆ ‘ಯದುವೀರ್ ಬಿಜೆಪಿ ಕಾರ್ಯಕರ್ತರ ಕೈಗೆ ಸಿಗುವ ವ್ಯಕ್ತಿಯಲ್ಲ’ ಎಂಬ ಅರ್ಥವನ್ನು ಸೂಚಿಸುವ ರೀತಿಯಲ್ಲಿ ಮಾತನಾಡಿದರು.

ನಿಮ್ಮ (ಕಾರ್ಯಕರ್ತರು) ಮುಖ ನೋಡಿದರೆ ಸಪ್ಪೆ ಆದಂತೆ ಇದೆ. ನಾನು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿನೋ ಬಿಡುತ್ತೇನೋ ಗೊತ್ತಿಲ್ಲ. ಆದರೆ, ನರೇಂದ್ರ ಮೋದಿ ಅವರನ್ನು ಮಗದೊಮ್ಮೆ ಪ್ರಧಾನಿಯನ್ನಾಗಿ ಮಾಡುವುದು ನಮ್ಮೆಲ್ಲರ ಗುರಿಯಾಗಬೇಕು. ಇದನ್ನು ವಿದಾಯ ಭಾಷಣ ಎಂದು ಭಾವಿಸಬೇಡಿ. 2004ರಲ್ಲೇ ನಾನು ಮೋದಿ ಪರವಾಗಿ ಲೇಖನ ಬರೆದಿದ್ದೆ. 2008ರಲ್ಲಿ ಮೋದಿಗೆ ಜೈಕಾರ ಹಾಕುವವರು ಕಡಿಮೆ ಇದ್ದರು. ಆ ಸಂದರ್ಭದಲ್ಲಿ ಅವರ ಪರವಾಗಿ ‘ಮೋದಿ ಯಾರು ತುಳಿಯದ ಹಾದಿ ’ ಎಂಬ ಕೃತಿ ಬರೆದೆ. ಆ ಪ್ರೀತಿ ವಿಶ್ವಾಸಕ್ಕಿಂತ ಬೇರೇನು ಬೇಕಾಗಿಲ್ಲ ಎಂದು ಹೇಳಿದರು.

ಎಷ್ಟು ವರ್ಷ ಬದುಕುತ್ತೇವೆ, ಎಷ್ಟು ವರ್ಷ ಅಧಿಕಾರದಲ್ಲಿ ಇರುತ್ತೇವೆ ಎಂಬುದು ಮುಖ್ಯವಲ್ಲ, ಸಿಕ್ಕ ಅಧಿಕಾರವನ್ನು ಜನರಿಗೋಸ್ಕರ ಯಾವ ರೀತಿ ಬಳಸಿದ್ದೇವೆ ಎಂಬುದು ಮುಖ್ಯ. ಯಾವುತ್ತೂ ಜೀವನ ಇಷ್ಟೇ ಎಂದು ಭಾವಿಸಬಾರದು. ಒಳ್ಳೆಯ ಕೆಲಸ ಮಾಡಲು ಸಾಕಷ್ಟು ಕ್ಷೇತ್ರಗಳು ಇವೆ. ಪಕ್ಷ ಟಿಕೆಟ್ ಕೊಡಲಿ ಅಥವಾ ಬಿಡಲಿ ನಾನು ಬಿಜೆಪಿ ಪರವಾಗಿ ಕೆಲಸ ಮಾಡುತ್ತೇನೆ ಎಂದರು.