ಜಿಲ್ಲೆ

ಸಂಸದ ಪ್ರತಾಪ್ ಸಿಂಹ ಲೇವಡಿ

reportermys

ಮಡಿಕೇರಿ:
ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಮಂಗ್ಯಾಗಳು ಆಗಬೇಡಿ ಎಂದು ರಾಜ್ಯದ ಜನತೆಗೆ ಮನವಿ ಮಾಡಿಕೊಳ್ಳುವುದಾಗಿ ಕೊಡಗು, ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದರು.


ಮಡಿಕೇರಿಯಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇವರು ಕೊಡಲು ಹೊರಡಿರುವ ೨೦೦ ಯೂನಿಟ್ ಪುಕ್ಕಟೆ ವಿದ್ಯುತ್, ಗೃಹಲಕ್ಷ್ಮೀಯ ೨ ಸಾವಿರ ರೂ., ನಿರುದ್ಯೋಗಿಗಳಿಗೆ ೩ ಸಾವಿರ ರೂ. ಯಾವುದೂ ನಂಬಲು ಹೋಗಬೇಡಿ. ಪಂಜಾಬ್‌ನಲ್ಲಿ ಇದೇ ರೀತಿ ಆಮ್ ಆದ್ಮಿ ಪಾರ್ಟಿಯವರು ಹೇಳಿ ಟೋಪಿ ಹಾಕಿದ್ದಾರೆ. ಕರ್ನಾಟಕದಲ್ಲೂ ಟೋಪಿ ಹಾಕಲು ಅಂತನೇ ಹೊರಟಿದ್ದಾರೆ. ಕರ್ನಾಟಕದ ಬಜೆಟ್ ವರ್ಷಕ್ಕೆ ೨ ಲಕ್ಷ ಕೊಟಿ ರೂ. ಇದೆ. ಇವರ ಉಚಿತ ಕೊಡಗೆಗಳು ನೋಡಿದರೆ ಹೆಚ್ಚು, ಕಡಿಮೆ ೧ ಲಕ್ಷ ಕೋಟಿ ಆಗುತ್ತದೆ. ಇದನ್ನೆಲ್ಲಾ ನೋಡಿದರೆ ಕೊಡಲು ಸಾಧ್ಯವೇ ಇಲ್ಲ. ಹಗಾಗಿ ಜನ ಇದನ್ನು ಅರ್ಥ ಮಾಡಿಕೊಂಡು ಮಂಗ್ಯಾಗಳಾಗಬೇಡಿ ಎಂದು ಮನವಿ ಮಾಡಿಕೊಳ್ಳುವುದಾಗಿ ಹೇಳಿದ ಅವರು, ಉಚಿತವಾಗಿ ಕೊಡುತ್ತೇವೆ ಎಂದು ಹೇಳಿದರೆ ಜೆಡಿಎಸ್, ಕಾಂಗ್ರೆಸ್ ಜೊತೆ ಬಿಜೆಪಿಯನ್ನೂ ನಂಬಬೇಡಿ. ಬಿಜೆಪಿ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರ ಆಶೀರ್ವಾದ ಕೇಳುತ್ತಿದೆ ಎಂದರು.


ಯುಗಾದಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಆಗಬೇಕಿತ್ತು ಆದರೆ ಯಾಕೆ ಆಗಿಲ್ಲ ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ, ಎಲ್ಲಾ ಭಾಗ್ಯ ಕೊಟ್ಟೆ ಎನ್ನುವ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಭಾಗ್ಯವೇ ಇಲ್ಲ. ಸಿದ್ದರಾಮಯ್ಯ ಅವರಿಗೆ ಇದೆಂತಹ ದೌರ್ಭಾಗ್ಯ, ಶಾದಿಭಾಗ್ಯ ಕೊಟ್ಟೆ, ಕ್ಷೀರ ಭಾಗ್ಯ, ಅನ್ನ ಭಾಗ್ಯ ಕೊಟ್ಟೆ ಎಂದು ಊರಿಗೆಲ್ಲಾ ಟಾಂ ಟಾಂ ಹೊಡೆಯುತ್ತಾರೆ ಆದರೆ ಒಂದು ಕ್ಷೇತ್ರ ಹುಡುಕುವ ದಯನೀಯ ಸ್ಥಿತಿ ಬಂದಿದೆ ಎಂದು ಲೇವಡಿ ಮಾಡಿದರು.


ಸಿದ್ದರಾಮಯ್ಯ ಅವರಿಗೆ ಕ್ಷೇತ್ರದ ಚಿಂತೆ, ಸಿದ್ದರಾಮಯ್ಯ ಅವರ ಧರ್ಮಪತ್ನಿಗೆ ಮಗನ ಭವಿಷ್ಯದ ಚಿಂತೆ, ರೇವಣ್ಣ ಅವರಿಗೆ ಭವಾನಿ ಅವರ ಚಿಂತೆ, ಕುಮಾರಣ್ಣಂಗೆ ನಿಖಿಲನ ಚಿಂತೆ ಹೀಗೆ ಕುಟುಂಬದ ಚಿಂತೆ ಮಾಡುವವರು ರಾಜ್ಯ ಮತ್ತು ರಾಜ್ಯದ ಚಿಂತೆ ಮಾಡುತ್ತಾರೆ ಎಂದು ಯಾಕೆ ತಿಳಿದುಕೊಳ್ಳುತ್ತೀರಿ ಎಂದು ಕೇಳಿದರು. ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ ಕುಟುಂಬವನ್ನು ಉದ್ದಾರ ಮಾಡ್ತಾರೆ ಇವರು. ಇವರಿಗೆಲ್ಲಾ ಕೇವಲ ಇವರ ಕುಟುಂಬದ ಚಿಂತೆ ಇರುವುದರಿಂದ ದಯವಿಟ್ಟು ಮಂಗ್ಯಾ ಆಗಲು ಹೇಗಬೇಡಿ ಎಂದು ಮನವಿ ಮಾಡಿಕೊಳ್ಳುವುದಾಗಿ ಹೇಳಿದರು.