ಜಿಲ್ಲೆ

‘ಪ್ರಸಂಗ ಪಂಚಕ-2’ 17ರಂದು

ವೀರೇಶ ಸೌದ್ರಿ

ಯಲ್ಲಾಪುರ: ತಾಲೂಕಿನ ಮಾಗೋಡಿನ ಮಹಾಗಣಪತಿ ದೇವಸ್ಥಾನದಲ್ಲಿ ಜುಲೈ 17 ರಂದು ಆಷಾಢ ಏಕಾದಶಿಯ ಪ್ರಯುಕ್ತ ಪ್ರಸಂಗ ಪಂಚಕ-2 ಕಾರ್ಯಕ್ರಮ ಆಯೋಜನೆಗೊಂಡಿದ್ದು, ಸಂಜೆ 6 ರಿಂದ ಬೆಳಗ್ಗೆ ರವರೆಗೆ ತಾಳಮದ್ದಲೆ ನಡೆಯಲಿದೆ ಎಂದು ಮಾಗೋಡಿನ ಶ್ರೀ ವೀರಮಾರುತಿ ತಾಳಮದ್ದಲೆ ಕೂಟದ ಸಂಚಾಲಕ ನರಸಿಂಹ ಭಟ್ಟ ಕುಂಕಿಮನೆ ಹೇಳಿದರು.

ತಾಲೂಕಿನ ಮಾಗೋಡ ವೀರಮಾರುತಿ ದೇವಸ್ಥಾನದಲ್ಲಿ ಮಂಗಳವಾರ ರಾತ್ರಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಸಂಜೆ 6ಕ್ಕೆ ಆರಂಭವಾಗಿ ಬೆಳಗ್ಗೆ 6 ಕ್ಕೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಕಚ-ದೇವಯಾನಿ, ಪಾದುಕಾ ಪ್ರದಾನ, ರುಕ್ಮಿಣಿ ಕಲ್ಯಾಣ, ಬಬ್ರುವಾಹನ ಹಾಗೂ ಮೀನಾಕ್ಷಿ ಕಲ್ಯಾಣ ತಾಳಮದ್ದಲೆಗಳು ನಡೆಯಲಿವೆ.

ಸ್ಥಳೀಯ ಹಾಗೂ ಸುತ್ತಮುತ್ತಲಿನ 50ಕ್ಕೂ ಹೆಚ್ಚು ಹಿರಿ-ಕಿರಿಯ ಕಲಾವಿದರು ಭಾಗವಹಿಸಲಿದ್ದಾರೆ. ಕಲಾಭಿಮಾನಿಗಳಿಗೆ ನಿರಂತರವಾಗಿ ಲಘು ಉಪಾಹಾರ, ಪಾನೀಯ ವ್ಯವಸ್ಥೆ ಮಾಡಲಾಗುವುದು. ಆಷಾಢ ಏಕಾದಶಿಯ ಪರ್ವಕಾಲದಲ್ಲಿ, ದೇವರ ಸನ್ನಿಧಿಯಲ್ಲಿ ಆತಿಥ್ಯ, ಆತ್ಮೀಯತೆಯೊಂದಿಗೆ ಕಲಾರಾಧನೆ ನಡೆಸುವುದು ನಮ್ಮ ಉದ್ದೇಶ ಎಂದರು.

ಕೂಟದ ಅಧ್ಯಕ್ಷ ನಾರಾಯಣ ಭಟ್ಟ ಮೊಟ್ಟೆಪಾಲ, ಸದಸ್ಯರಾದ ಮಹಾಬಲೇಶ್ವರ ಭಟ್ಟ ಬೆಳಶೇರ, ನಾಗಪ್ಪ ಕೋಮಾರ, ಶಿವರಾಮ ಭಾಗ್ವತ ಮಣ್ಕುಳಿ, ನಾಗರಾಜ ಭಟ್ಟ ಕುಂಕಿಪಾಲ, ಮಂಜುನಾಥ ಜೋಶಿ, ಗೋಪಾಲಕೃಷ್ಣ ಭಟ್ಟ ಕಬ್ಬಿನಕುಂಬ್ರಿ, ಶ್ರೀಧರ ಭಟ್ಟ, ದೀಪಕ ಭಟ್ಟ ಕುಂಕಿ ಭಾಗವಹಿಸಿದ್ದರು.