ಮಂಡ್ಯ: ಕೃಷಿ ಇಲಾಖೆಯೊಂದಿಗೆ ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆ ವಿಲೀನಕ್ಕೆ ರಾಜ್ಯ ಸರ್ಕಾರ ಮುಂದಾಗಿರುವುದು ರೈತ ವಿರೋಧಿ ನೀತಿಯಾಗಿದೆ ಎಂದು ಪ್ರಾಂತ ರೈತ ಸಂಘದ ರಾಜ್ಯ ಸಹ ಕಾರ್ಯದರ್ಶಿ ಎನ್.ಎಲ್.ಭರತ್‌ರಾಜ್ ಆಕ್ರೋಶ ವ್ಯಕ್ತಪಡಿಸಿದರು.
ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸಿ ಖಾಲಿ ಇರುವ 2,346 ಹುದ್ದೆಗಳನ್ನು ರದ್ದು ಮಾಡಿ ರೇಷ್ಮೆ ಕೃಷಿಯನ್ನು ಅವಲಂಬಿಸಿ ಜೀವನ ನಡೆಸುತ್ತಿರುವ ಸುಮಾರು 1,38,964 ರೇಷ್ಮೆ ಬೆಳೆಗಾರರ ಬದುಕನ್ನು ವಿನಾಶ ಮಾಡಲು ಹೊರಟಿರುವುದು ಸರಿಯಲ್ಲ. ಆದ್ದರಿಂದ ಇಂತಹ ನಿರ್ಧಾರವನ್ನು ಕೂಡಲೇ ಕೈಬಿಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಜಿಲ್ಲೆಯಲ್ಲಿ ಸಿಲ್ಕ್, ಮಿಲ್ಕ್ ಹಾಗೂ ಶುಗರ್ ಉದ್ಯಮ ಜೀವಾಳವಾಗಿವೆ. ಈಗಾಗಲೇ ಮಿಲ್ಕ್, ಶುಗರ್ ಸಂಕಷ್ಟದ ಪರಿಸ್ಥಿತಿಯಲ್ಲಿವೆ. ಇತ್ತೀಚೆಗೆ ರೇಷ್ಮೆಗೆ ಉತ್ತಮ ಬೆಲೆ ಇರುವುದರಿಂದ ನಿರುದ್ಯೋಗಿ ವಿದ್ಯಾವಂತರು ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂತಹ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಜಿಲ್ಲೆಯಲ್ಲಿ ಸುಮಾರು 32,000 ಎಕರೆ ಪ್ರದೇಶದಲ್ಲಿ ಹಿಪ್ಪುನೇರಳೆ ತೋಟವಿದ್ದು, ಸುಮಾರು 2 ಲಕ್ಷದಷ್ಟು ಜನರು ಜೀವನ ನಡೆಸುತ್ತಿದ್ದಾರೆ. ಆ ಮೂಲಕ ರೇಷ್ಮೆ ಉತ್ಪಾದನೆಯಲ್ಲಿ ಮಂಡ್ಯ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ ಎಂದರು.
ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ ಅವರು ರೇಷ್ಮೆ ಬೆಳೆಗಾರರಿಗೆ ರಕ್ಷಣೆ ನೀಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಬಿಎಸ್ಸಿ, ಎಂಎಸ್ಸಿ ವ್ಯಾಸಂಗ ಮಾಡಿರುವ ಕೃಷಿಕರ ಮಕ್ಕಳನ್ನು ಬೀದಿ ಪಾಲು ಮಾಡಲು ಹೊರಟಿದ್ದಾರೆ. 25 ವರ್ಷಗಳಿಂದ ಕೃಷಿ ಇಲಾಖೆಗೆ ನೇಮಕಾತಿ ಮಾಡದಿರುವ ಹಿನ್ನೆಲೆಯಲ್ಲಿ ನೇರ ನೇಮಕಾತಿ ಮೂಲಕ ಖಾಲಿ ಇರುವ ರೇಷ್ಮೆ ಇಲಾಖೆಯ 2,846 ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಕಬ್ಬಿಗೆ ಬೆಂಬಲ ಬೆಲೆ ಘೋಷಿಸುವಂತೆ ರಾಜ್ಯಾದ್ಯಂತ ಹೋರಾಟ ನಡೆಯುತ್ತಿದೆ. ಸಕ್ಕರೆ ಕಂಪನಿ ಮಾಲೀಕರೇ ಆಳುವ ಸರ್ಕಾರದ ಪಾಲುದಾರರಾಗಿರುವುದರಿಂದ ಕಬ್ಬಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಪ್ರತಿ ಟನ್ ಕಬ್ಬಿಗೆ 5 ಸಾವಿರ ರೂ. ನೀಡಬೇಕು. ಡಾ.ಸ್ವಾಮಿನಾಥನ್ ಆಯೋಗದ ವರದಿಯಂತೆ ಎಫ್‌ಆರ್‌ಪಿ ನಿಗದಿಪಡಿಸಬೇಕು. ಎಫ್‌ಆರ್‌ಪಿಗೆ ಸಕ್ಕರೆ ಇಳುವರಿ ಬೇಸ್ 8.5 ಆಧಾರದಲ್ಲಿ ನಿಗದಿಪಡಿಸಬೇಕು. ಕಬ್ಬಿನ ಉಪ ಉತ್ಪನ್ನಗಳಿಂದ ಬರುವ ಆದಾಯದಲ್ಲಿ ಶೇ.50 ರಷ್ಟು ಲಾಭಾಂಶವನ್ನು ರೈತರಿಗೆ ನೀಡಬೇಕು. ಕಬ್ಬು ಕಟಾವು ಮಾಡಿದ 15 ದಿನದೊಳಗೆ ಹಣ ಪಾವತಿ ಮಾಡಬೇಕು. ನ.28ರಂದು ಹುಬ್ಬಳ್ಳಿಯಲ್ಲಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರೈತ ಮುಖಂಡರ ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ಅಖಿಲ ಭಾರತ ಕಬ್ಬು ಬೆಳೆಗಾರರ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಿ.ರವೀಂದ್ರನ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಂಘದ ಜಿಲ್ಲಾ ಮುಖಂಡರಾದ ಎನ್.ಲಿಂಗರಾಜಮೂರ್ತಿ, ಸಿದ್ದೇಗೌಡ, ಜವರೇಗೌಡ, ರೇಷ್ಮೆ ಬೆಳೆಗಾರರಾದ ಎ.ಎಲ್.ಶಿವಕುಮಾರ್, ಶಿವಲಿಂಗು, ನಾರಾಯಣಗೌಡ ಸುದ್ದಿಗೋಷ್ಠಿಯಲ್ಲಿದ್ದರು.