ಜಿಲ್ಲೆ

ಹೋರಾಟ ತೀವ್ರಗೊಳಿಸಲು ನಿರ್ಣಯ: ಪ್ರಾಂತ ರೈತ ಸಂಘದ ಪದಾಧಿಕಾರಿಗಳ ಸಭೆ

reportermys

ಮಳವಳ್ಳಿ: ಪ್ರತಿ ಟನ್ ಕಬ್ಬಿಗೆ 5 ಸಾವಿರ ರೂ., ಲೀಟರ್ ಹಾಲಿಗೆ 50 ರೂ. ನಿಗದಿಗಾಗಿ ಹಾಗೂ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವುದರ ವಿರುದ್ಧ ಹೋರಾಟ ತೀವ್ರಗೊಳಿಸುವ ನಿರ್ಣಯವನ್ನು ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೈಗೊಂಡರು.
ಸಭೆಯಲ್ಲಿ ಸಂಘದ ತಾಲೂಕು ಅಧ್ಯಕ್ಷ ಎನ್.ಎಲ್.ಭರತ್‌ರಾಜ್ ಮಾತನಾಡಿ, ಅ.2 ರಂದು ಹಲಗೂರಿನಲ್ಲಿ ಸಂಘದ ನಾಲ್ಕನೇ ಸಮ್ಮೇಳನದಲ್ಲಿ ರೈತಪರ ಹೋರಾಟದ ರೂಪುರೇಷೆಗಳ ಬಗ್ಗೆ ಹಾಗೂ ಬಗರಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ಇವುಗಳ ಜಾರಿಗಾಗಿ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.
ಎಲ್ಲ ಮಹಿಳೆಯರು ಕೃಷಿ ಉದ್ದೇಶಕ್ಕಾಗಿ ಬ್ಯಾಂಕ್ ಮತ್ತು ಮೈಕ್ರೊ ಫೈನಾನ್ಸ್‌ಗಳಲ್ಲಿ ಮಾಡಿರುವ ಸ್ತ್ರೀಶಕ್ತಿ ಸ್ವ-ಸಹಾಯ ಸಂಘದ ಸಾಲಗಳನ್ನು ಮನ್ನ ಮಾಡಬೇಕು. ಸತ್ಯಮಂಗಲ, ಕೊಳ್ಳೇಗಾಲ, ಮಳವಳ್ಳಿ, ಹಲಗೂರು, ಕನಕಪುರ ಮಾರ್ಗವಾಗಿ ರೈಲ್ವೆ ಯೋಜನೆ ಪ್ರಾರಂಭಿಸಬೇಕು. ಕೋಮುವಾದ, ಜಾತಿವಾದ, ಅಸಮಾನತೆ ತೊಲಗಿ, ಸಾಮರಸ್ಯ ಸಹಬಾಳ್ವೆ ಉಳಿಯಬೇಕು. ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುವ ಭ್ರಷ್ಟಾಚಾರ ನಿಲ್ಲಬೇಕು. ಹಲಗೂರು, ಬೆಳಕವಾಡಿ, ಕಿರುಗಾವಲು ಆಸ್ಪತ್ರೆಗಳಲ್ಲಿ ದಿನದ 24 ಗಂಟೆ ವೈದ್ಯರ ಸೇವೆ ನೀಡಬೇಕು. ಜತೆಗೆ ಸ್ಕಾೃನಿಂಗ್ ಮತ್ತು ಇತರ ಪರೀಕ್ಷಾ ಕೇಂದ್ರಗಳನ್ನು ಸಕ್ರಿಯ ಕಾರ್ಯ ನಿರ್ವಹಿಸುವ ಕ್ರಮವಾಗಬೇಕೆಂದು ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದರು.
ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ರೈಲ್ವೆ ಕಂಬಿ ಹಾಗೂ ಟ್ರಂಚ್ ತೆರೆಯಬೇಕು. ನಷ್ಟಕ್ಕೆ ಒಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಕಾಡಂಚಿನ ರೈತರಿಗೆ ಅರಣ್ಯ ಇಲಾಖೆ ಕಿರುಕುಳ ತಪ್ಪಿಸಲು ಸಂತ್ರಸ್ತ ಅನ್ನದಾತರ ಬೆಂಬಲಕ್ಕೆ ಸಂಘಟನೆ ನಿಲ್ಲಲಿದೆ ಎಂದು ತಿಳಿಸಿದರು.
ತಾಲೂಕು ಸಮಿತಿ ರಚನೆ: ಇದೇ ವೇಳೆ ಸಂಘಟನೆಗೆ ತಾಲೂಕು ಸಮಿತಿ ಪದಾಧಿಕಾರಿಗಳನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎನ್.ಎಲ್. ಭರತ್‌ರಾಜ್, ಕಾರ್ಯದರ್ಶಿಯಾಗಿ ಎನ್.ಲಿಂಗರಾಜಮೂರ್ತಿ ಅವರನ್ನು ಮರು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಎ.ಎಲ್. ಶಿವಕುಮಾರ್, ಸಹಕಾರ್ಯದರ್ಶಿಗಳಾಗಿ ಚಿಕ್ಕಸ್ವಾಮಿ, ಗುರುಸ್ವಾಮಿ, ಪ್ರಮೀಳಾ, ಸಮಿತಿ ಸದಸ್ಯರಾಗಿ ಶಿವಪ್ಪ, ಅನಿತಾ, ಮರಿಲಿಂಗಯ್ಯ, ಹಿಪ್ಜುಲ್ಲಾ ಸೇರಿದಂತೆ 19 ಜನರನ್ನು ಆಯ್ಕೆ ಮಾಡಲಾಯಿತು.