ಶಿರಸಿ: ಜಿಲ್ಲೆಯಲ್ಲಿ ಈಡಿಗ ನಾಮಧಾರಿ ಸಮುದಾಯದ ಮತ ಪಡೆದು ಗೆದ್ದು ಬಂದು ಅಧಿಕಾರ ಅನುಭವಿಸುತ್ತಿರುವ ನಾಯಕರು ಈಗ ಹೊಂದಾಣಿಕೆ ರಾಜಕಾರಣ ಮಾಡುವ ಮೂಲಕ ಸಮುದಾಯವನ್ನು ಮರೆತಿದ್ದಾರೆ. ಅವರನ್ನು ಎಚ್ಚರಿಸುವ ಸಲುವಾಗಿ ಸಿದ್ದಾಪುರದ ಬಾಲ ಭವನದಲ್ಲಿ ಸೆ. 3ರಂದು ಸಂಪೂರ್ಣ ದಿನ " ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯದ ಬಗ್ಗೆ ಸಮಗ್ರ ಚಿಂತನೆ, ಚರ್ಚೆ, ನಿರ್ಣಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ, ಚಿತ್ತಾಪುರದ ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಶಿರೂರು ಗುಡ್ಡ ಕುಸಿದಾಗ ಈಡಿಗ ನಾಮಧಾರಿ ವ್ಯಕ್ತಿಗಳು ಸಾವನ್ನಪ್ಪಿದ್ದರೂ ಇದುವರೆಗೂ ಅವರಿಗೆ ಸೂಕ್ತ ಪರಿಹಾರ ಸಿಕಕಿಲ್ಲ. ಕೇರಳ ಸರ್ಕಾರ ಒಬ್ಬ ವ್ಯಕ್ತಿ ಮೃತಪಟ್ಟಿದ್ದಕ್ಕಾಗಿ ಇಲ್ಲಿಗೆ ಆಗಮಿಸಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ, ಮೃತರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಿದೆ. ಆದರೆ, ಜಿಲ್ಲೆಯಲ್ಲಿ ಆರಿಸಿ ಬಂದ ಶಾಸಕ, ಸಂಸದರು, ಜನನಾಯಕರು ಮಾತನಾಡಿಲ್ಲ. ಅವರ ಹೊಂದಾಣಿಕೆಯ ರಾಜಕೀಯದಿಂದಾಗಿ ಇಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸೂಕ್ತ ಪರಿಹಾರ ಸಿಕ್ಕಿಲ್ಲ. ನಾವು ಈಗಾಗಲೇ ಐ ಆರ್ ಬಿ ಕಂಪನಿಯ ಮೇಲೆ ಕೊಲೆ ಪ್ರಕರಣ ದಾಖಲಿಸಿದ್ದು, ಅಂಕೋಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಹ ಕಂಪನಿಗೆ ಅನುಕೂಲವಾಗುವಂತೆ ನಡೆ ತೋರಿದ್ದಾರೆ. ಪ್ರಕೃತಿ ವಿಕೋಪ ಸಂಭವಿಸಿದಾಗಿ ಅಧಿಕಾರಿಗಳು ಹಬ್ಬದ ವಾತಾವರಣ ಅನುಭವಿಸುತ್ತಾರೆ, ಇಂತಹ ಸಂದರ್ಭದಲ್ಲಿ ಯಾವ ರೀತಿ ಲೂಟಿ ಮಾಡಬಹುದು ಎಂಬುದು ಅವರಿಗೆ ತಿಳಿದಿದೆ. ಸಮುದಾಯದ ಸಹಕಾರದಿಂದ ಗೆದ್ದು ಬಂದವರು ಈಡಿಗ ನಾಮಧಾರಿ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ. ಮಂತ್ರಿಗಳಾಗಿ, ಎಂಎಲ್ ಎ ಆದರೂ ಸಮುದಾಯದ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದು ಆಕ್ಷೇಪಿಸಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಈಡಿಗ ನಾಮಧಾರಿಗಳಿಗೆ ಎರಡು ಸಚಿವ ಸ್ಥಾನ, ಮೂರು ನಿಗಮ ಅಧ್ಯಕ್ಷ ಸ್ಥಾನ ನೀಡಿತ್ತು. ಆದರೆ, ಈ ಸರ್ಕಾರದಲ್ಲಿ ಈಡಿಗ ನಾಮಧಾರಿ ಸಮಾಜದ ಏಳು ಶಾಸಕರಿದ್ದರೂ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ಚುನಾವಣೆಯ ವೇಳೆ ಹಿಂದು ಮುಸ್ಲಿಂ ಎಂಬ ಬೇಧಭಾವ ಹುಟ್ಟುಹಾಕಿರುವ ಕಾರಣ ಮಂಗಳೂರಿನಲ್ಲಿ ಇದುವರೆಗೆ 24 ಬಿಲ್ಲವ ಸಮಾಜದ ಯುವಕರು ಹತ್ಯೆಯಾಗಿದ್ದಾರೆ. ಈ ಸರ್ಕಾರದಲ್ಲಿ ನಾರಾಯಣಗುರು ಸ್ವಾಮೀಜಿ ಅವರ ಹೆಸರನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದ್ದರೂ ನಾರಾಯಣಗುರು ನಿಗಮಕ್ಕೆ ಒಂದು ರೂ. ಸಹ ಹಣ ನೀಡಿಲ್ಲ. ನಾರಾಯಣ ಗುರುಗಳ ಪುತ್ಥಳಿ ನಿರ್ಮಾಣ ಇಂದಿಗೂ ಸಹ ಆಗಿಲ್ಲ. ಶಿರೂರು ಗುಟ್ಟ ಪ್ರಕರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೃತರಾದವರಿಗೆ ಪರಿಹಾರವನ್ನು ಅವರ ಮನೆಗೇ ತೆರಳಿ ಸರ್ಕಾ ನೀಡಿದೆ. ಆದರೆ, ಶಿರೂರು ಗುಡ್ಡ ಕುಸಿದು ಸಾವನ್ನಪ್ಪಿದ ಪ್ರಕರಣದಲ್ಲಿ ರಾಜ್ಯ ಸರ್ಕಾರ ಪರಿಹಾರ ನೀಡಲು ತೀವ್ರ ನಿರ್ಲಕ್ಷ್ಯ ತೋರುತ್ತಿದೆ. ಹಿಂದುಳಿದ ಸಮಾಜದವರು ಅವಘಡದಲ್ಲಿ ಮೃತಪಟ್ಟರೆ ಮಂಕಾಳ ವೈದ್ಯ ಸಹ ಅವರ ಮನೆಗೆ ತೆರಳಿ ಪರಿಹಾರ ನೀಡುತ್ತಾರೆ. ಆದರೆ, ನಾಮಧಾರಿ ಸಮಾಜದವರ ಬಗ್ಗೆ ಮಾತ್ರ ಏಕೆ ನಿರ್ಲಕ್ಷ್ಯ ? ಮಂಕಾಳ ವೈದ್ಯ ಚುನಾವಣೆಯಲ್ಲಿ ಗೆಲುವಿಗೆ ನಾಮಧಾರಿ ಸಮಾಜದ ಕೊಡುಗೆ ಇದೆಯೋ ಇಲ್ಲವೋ ಎಂಬುದನ್ನು ಅವರು ಪರಾಮರ್ಶಿಸಿಕೊಳ್ಳಲಿ. ಜಿಲ್ಲೆಯ ನಾಮಧಾರಿ ನೌಕರರನ್ನು ಉದ್ದೇಶಪೂರ್ವಕವಾಗಿ ಪದೇ ಪದೇ ವರ್ಗ ಮಾಡುತ್ತಿರುವದೂ ಸಹ ಖಂಡನಾರ್ಹ ಎಂದರು.
ನಾಮಧಾರಿ ಈಡಿಗ ಸಮುದಾಯದ ಒಗ್ಗಟ್ಟಿನ ವೈಫಲ್ಯದ ಲಾಭವನ್ನು ಜಿಲ್ಲೆಯ ರಾಜಕಾರಣಿಗಳು ಪಡೆಯುತ್ತಿದ್ದಾರೆ. ರಾಜಕಾರಣಿಗಳು ನಮ್ಮ ಸಮುದಾಯವನ್ನು ಭಯದ ವಾತಾವರಣದಲ್ಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸೆ.3ರಂದು ಸಿದ್ದಾಪುರದಲ್ಲಿ ಬೃಹತ್ ವಿಶೇಷ ಸಭೆ ಏರ್ಪಡಿಸಿದ್ದೇವೆ. ಜಿಲ್ಲೆಯ ಸರ್ವ ಪಕ್ಷದಲ್ಲಿ ಗುರುತಿಸಿಕೊಂಡಿರುವ ಸಮಾಜದ ರಾಜಕೀಯ ಪ್ರಮುಖರು, ಉದ್ಯಮಿಗಳು, ಸಮಾಜ ಚಿಂತಕರು, ಕಲಾವಿದರು, ನೌಕರರ ವಿಶೇಷ ಸಭೆ ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ದೇವರಾಜ ನಾಯ್ಕ ಮಧುರವಳ್ಳಿ, ಭಾಸ್ಕರ ನಾಯ್ಕ, ಮಂಜುನಾಥ ನಾಯ್ಕ ಮಾಳಂಜಿ, ದಿನೇಶ ನಾಯ್ಕ ಇತರರಿದ್ದರು.