ಜಿಲ್ಲೆ

ಮುಕಳೆಪ್ಪ ಬಂಧನಕ್ಕೆ ಪ್ರಮೋದ ಮುತಾಲಿಕ್‌ ಒತ್ತಾಯ

ಕಾರವಾರ: ನಕಲಿ ದಾಖಲೆ ನೀಡಿ ಹಿಂದು ಹುಡುಗಿಯ ವಿವಾಹವಾಗಿರುವ ಮುಕಳೆಪ್ಪ ಎಂದು ಪ್ರಸಿದ್ಧವಾಗಿರುವ ಯು ಟ್ಯೂಬರ್ ಖ್ವಾಜಾ ಎಂಬಾತನನ್ನು ಬಂಧಿಸಬೇಕು ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಒತ್ತಾಯಿಸಿದರು.

ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರಿಗೆ, ಎಸ್‌ಪಿ ಕಚೇರಿಗೆ ಹಾಗೂ ಜಿಲ್ಲಾ ನೋಂದಣಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಖ್ವಾಜಾ ಶಿರಹಟ್ಟಿ ಎಂಬ ಧಾರವಾಡ ಜಿಲ್ಲೆಯ ಮುಸ್ಲೀಂ ಯುವಕ ಯು ಟ್ಯೂಬ್‌ನಲ್ಲಿ ವಿಡಿಯೋಗಳನ್ನು ಮಾಡಿ ಬಿಡುತ್ತಿದ್ದು, ಹಿಂದು ಧರ್ಮದ ಮೇಲೆ ಅದರಲ್ಲಿ ಅವಹೇಳನ ಮಾಡುತ್ತಿದ್ದಾನೆ. ಮಾತ್ರವಲ್ಲ ಲವ್ ಜಿಹಾದ್ ಮಾಡುತ್ತಿದ್ದಾನೆ. ಹಿಂದು ಹುಡುಗಿಯರಿಗೆ ಬುರ್ಖಾ ಹಾಕಿಸಿ, ಗೋ ಮಾಂಸ ತಿನ್ನಿಸುವಂಥ ದೊಡ್ಡ ಜಾಲವೇ ಇದೆ ಎಂದರು.

ಖ್ವಾಜಾ ನಕಲಿ ದಾಖಲೆ ನೀಡಿ, ಮುಂಡಗೋಡ ಸಬ್ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಗಾಯತ್ರಿ ಜಾಲಿಹಾಳ ಎಂಬ ಹಿಂದು ಯುವತಿಯನ್ನು ವಿವಾಹವಾಗಿದ್ದಾನೆ. ಈ ಬಗ್ಗೆ ಸೆಪ್ಟೆಂಬರ್ 22 ರಂದು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಆದರೆ, ಇದುವರೆಗೂ ಆತನನ್ನು ಬಂಽಸಿ ವಿಚಾರಣೆ ಮಾಡಿಲ್ಲ. ಕಠಿಣವಲ್ಲದ ಕೆಲವು ಸೆಕ್ಷನ್‌ಗಳನ್ನು ಹಾಕಿ ಪೊಲೀಸರು ಆತನಿಗೆ ಸಹಕಾರ ನೀಡುತ್ತಿದ್ದಾರೆ. ಭ್ರಷ್ಟಾಚಾರ ಮಾಡಿದ್ದಾರೆ. ಇದರಿಂದ ತನಿಖಾಧಿಕಾರಿಯನ್ನು ಬದಲು ಮಾಡಬೇಕು ಎಂದು ಮುತಾಲಿಕ್ ಒತ್ತಾಯಿಸಿದರು.

ಮುಂಡಗೋಡ ಸಬ್ ರಿಜಿಸ್ಟ್ರಾರ್‌ ಕಚೇರಿ ಭ್ರಷ್ಟಾಚಾರದ ಕೂಪವಾಗಿದೆ. ಅಲ್ಲಿನ ಗುತ್ತಿಗೆ ಉದ್ಯೋಗಿಗಳು 3 ಕೋಟಿ ರೂ. ಮನೆ ಕಟ್ಟಿದ್ದಾರೆ. ಅಲ್ಲಿ ಮೃತರ ಹೆಸರಿನಲ್ಲಿ ಜಮೀನು ನೋಂದಣಿ ಮಾಡಿದ ಉದಾಹರಣೆ ಇದೆ. ಖ್ವಾಜಾ ಶಿರಹಟ್ಟಿ ಮುಂಡಗೋಡಿನಲ್ಲಿ ನಕಲಿ ದಾಖಲೆ ನೀಡಿ ವಿವಾಹವಾದ ಬಗ್ಗೆ ದಾಖಲೆ ಸಲ್ಲಿಸಿದರೂ ಸಬ್ ರಿಜಿಸ್ಟ್ರಾರ್‌ ವಿರುದ್ಧ ಕ್ರಮವಾಗಿಲ್ಲ. ತಕ್ಷಣ ಸಬ್ ರಿಜಿಸ್ಟ್ರಾರ್ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಽಕಾರಿಗಳು ಕ್ರಮ ವಹಿಸದೇ ಇದ್ದರೆ ಪ್ರತಿಭಟನೆ ತೀವ್ರ ಮಾಡಬೇಕಾದೀತು ಎಂದು ಎಚ್ಚರಿಸಿದರು. ಶ್ರೀರಾಮ ಸೇನೆಯ ಪ್ರಮುಖರು ಈ ಸಂದರ್ಭದಲ್ಲಿದ್ದರು.

ನಮ್ಮನೆಯಲ್ಲೇ ಉಂಡು ಮೋಸ ಮಾಡಿದ

ಖ್ವಾಜಾ ಶಿರಹಟ್ಟಿ ನಮ್ಮ ಮನೆಯಲ್ಲೇ ಉಂಡು ಮೋಸ ಮಾಡಿದ ಎಂದು ಆತನ ಪತ್ನಿ ಗಾಯತ್ರಿ ಅವರ ತಾಯಿ ಶಿವಕ್ಕ ಜಾಲಿ ಹಾಳ ಆರೋಪಿಸಿದ್ದಾರೆ. ಯು ಟ್ಯೂಬ್ ವಿಡಿಯೋ ಮಾಡಲು ನಮ್ಮ ಮನೆಯನ್ನೇ ನೀಡಿದ್ದೆವು. ಆದರೆ, ನಮ್ಮ ಮಗಳನ್ನೇ ಆತ ಅಪಹರಿಸಿಕೊಂಡು ಹೋದ ಎಂದು ಅಸಮಾಧಾನ ಹೊರ ಹಾಕಿದರು.