ಗಂಗಾವತಿಯಲ್ಲಿ ಜಿಲ್ಲಾ ಗಂಗಾಮತಸ್ಥರ ಸಂಘ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಭೆಯನ್ನು ಮಾಜಿ ಸಚಿವ ಹಾಗೂ ಹಿರಿಯ ಮುಖಂಡ ಪ್ರಮೋದ ಮಧ್ವರಾಜ್ ಶುಕ್ರವಾರ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಸೋಮಣ್ಣ ಬಾರಕೇರ, ಪ್ರಮುಖರಾದ ರಾಜಶೇಖರ ಮುಸ್ಟೂರು, ವಿರೂಪಾಕ್ಷಪ್ಪ ಮುದ್ಲಾಪುರ ಇತರರಿದ್ದರು. 
ಜಿಲ್ಲೆ

ಪಕ್ಷಾತೀತವಾಗಿ ಸಮಾಜದ ಏಳಿಗೆಗೆ ಶ್ರಮಿಸಿ

ಪ್ರವೀಣ ಉದುಸಾ ದಲಬಂಜನ್

ಗಂಗಾವತಿ: ಸಂಘಟನಾತ್ಮಕವಾಗಿ ಸಮುದಾಯವನ್ನು ಅಭಿವೃದ್ಧಿಪಡಿಸಲು ನಿಸ್ವಾರ್ಥ ಸೇವೆ ಅಗತ್ಯ ಎಂದು ಮಾಜಿ ಸಚಿವ ಹಾಗೂ ಗಂಗಾಮತ ಸಮಾಜದ ರಾಜ್ಯ ಮುಖಂಡ ಪ್ರಮೋದ ಮಧ್ವರಾಜ್ ಹೇಳಿದರು.

ಶೈಕ್ಷಣಿಕ ಅಭಿವೃದ್ಧಿಗೆ ಪ್ರತಿಯೊಬ್ಬರನ್ನೂ ಒಗ್ಗೂಡಿಸಿಕೊಂಡು ಹೋಗಿ

ನಗರದ ಎಸ್‌ಎಸ್‌ಎಲ್‌ಆರ್ ಸಭಾಂಗಣದಲ್ಲಿ ಜಿಲ್ಲಾ ಗಂಗಾಮತಸ್ಥರ ಸಂಘ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಭೆ ಉದ್ಘಾಟಿಸಿ ಮಾತನಾಡಿದರು. ಸಮಾಜದ ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಪ್ರತಿಯೊಬ್ಬರನ್ನೂ ಒಗ್ಗೂಡಿಸಿಕೊಂಡು ಹೋಗಬೇಕು ಎಂದರು.
ಗಂಗಾಮತ ಸಮುದಾಯಕ್ಕೆ ಪೌರಾಣಿಕ ಹಿನ್ನೆಲೆಯಿದ್ದು, ಬಸವಣ್ಣನ ಕಾಲದಲ್ಲೂ ವಿಶೇಷ ಮಾನ್ಯತೆ ಇತ್ತು. ಸಂಘಟನೆ ಕೊರತೆಯಿಂದ ಎಲ್ಲ ಕ್ಷೇತ್ರದಿಂದ ಹಿಂದುಳಿದಿದೆ. ಬಡತನ, ನಿರುದ್ಯೋಗ, ಅನಕ್ಷರತೆ ಸಮಾಜವನ್ನು ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಕೀಯ ಸ್ಥಾನಮಾನ ದೊರೆತರೆ ಸರ್ಕಾರಕ್ಕೆ ಕೇಳಲು ಧ್ವನಿ

ಸಮಾಜದಲ್ಲಿ 37 ಒಳಪಂಗಡಗಳಿವೆ. ಎಸ್ಟಿ ಮೀಸಲಿಗಾಗಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಇನ್ನು ಮಾನ್ಯತೆ ಸಿಕ್ಕಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಮೀಸಲು ಹಕ್ಕೋತ್ತಾಯಕ್ಕಾಗಿ ಶಕ್ತಿ ನಮ್ಮಲ್ಲಿಲ್ಲ. ರಾಜ್ಯದಲ್ಲಿ ಇಬ್ಬರೇ ಶಾಸಕರಿದ್ದು, ಕೇಂದ್ರದಲ್ಲಿ ಒಬ್ಬರಿಲ್ಲ. ನಿರ್ಣಾಯಕ ಮತದಾರರಾಗಿದ್ದರೂ ಅಭಿವೃದ್ಧಿ ಕಂಡಿಲ್ಲ. ಇನ್ನೊಬ್ಬರಿಗೆ ಮತ ನೀಡುವುದಕ್ಕೆ ಸೀಮಿತರಾಗಿದ್ದೇವೆ. ರಾಜಕೀಯ ಸ್ಥಾನಮಾನ ದೊರೆತರೆ ಸರ್ಕಾರಕ್ಕೆ ಕೇಳಲು ಧ್ವನಿ ಬರಲಿದೆ. ಮೀಸಲು ವಿಚಾರದಲ್ಲಿ ಸರ್ಕಾರ ಸ್ಪಂದಿಸುತ್ತಿಲ್ಲ. ಮುಂದಿನ ಪೀಳಿಗೆ ಬೆಳವಣಿಗೆಗೆ ಸಂಘಟನೆ ಜತೆಗೆ ಪಕ್ಷಾತೀತವಾಗಿ ಸಮಾಜದ ಏಳಿಗೆಗೆ ಶ್ರಮಿಸಬೇಕೆಂದರು.

ಜಿಲ್ಲಾಧ್ಯಕ್ಷ ಸೋಮಣ್ಣ ಬಾರಕೇರ, ಪ್ರಮುಖರಾದ ವಿರೂಪಾಕ್ಷಪ್ಪ ಮುದ್ಲಾಪುರ, ರಾಜಶೇಖರ ಮುಸ್ಟೂರು, ಯಮನಪ್ಪ ಕಬ್ಬೇರ, ಯಂಕಪ್ಪ ಕಬ್ಬೇರ್, ವೆಂಕಟೇಶ ಬಾರಕೇರ್, ಈ.ಧನರಾಜ್, ಯಂಕೋಬಪ್ಪ, ಬುಡ್ಡಪ್ಪ ಬಾರಕೇರ, ರಾಮಣ್ಣ ಸುಣಗಾರ, ಹನುಮೇಶ ಭಟಾರಿ, ಪರಶುರಾಮ ಮಡ್ಡೇರ್, ಶಿವಕುಮಾರ ಅರಿಕೇರಿ, ಹರೀಶ್ ಬಾರಕೇರ, ಕನಕಪ್ಪ ಸುಣಗಾರ ಇತರರಿದ್ದರು.