ಜಿಲ್ಲೆ

ಚನ್ನಗಿರಿ ಪೊಲೀಸ್ ಠಾಣೆಗೆ ಶ್ರೀರಾಮ ಸೇನೆ ಮುಖ್ಯಸ್ಥ ಭೇಟಿ

ಚನ್ನಗಿರಿ: ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಭಾನುವಾರ ತಾಲೂಕಿನ ಪೊಲೀಸ್ ಠಾಣೆಗೆ ಭೇಟಿ ನೀಡಿ ಆರೋಪಿ ಅಮ್ಜದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದರು.

ಈ ವೇಳೆ ಮಾತನಾಡಿದ ಅವರು, ಪಟ್ಟಣದಲ್ಲಿ ನಡೆದಿರುವ ರಾಕ್ಷಸಿ ಪ್ರವೃತ್ತಿಯ ಘಟನೆಯನ್ನು ವಿರೋಧಿಸುತ್ತೇನೆ. ಕಳೆದ ಹತ್ತು ವರ್ಷದಿಂದ ನೂರಾರು ಮಹಿಳೆಯರು, ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪಿ ಅಮ್ಜದ್​ಗೆ ಜೈಲು ಶಿಕ್ಷೆ ಬದಲು ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಪೊಲೀಸರು, ನ್ಯಾಯಾಲಯ ಮತ್ತು ಸರ್ಕಾರ ಗಂಭೀರವಾಗಿ ಪರಿಗಣಿಸಿ ಮೂರು ತಿಂಗಳಲ್ಲಿ ಇತ್ಯರ್ಥಗೊಳಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂದರು.

ಈ ಪ್ರಕರಣದಿಂದ ಆರೋಪಿ ತಪ್ಪಿಸಿಕೊಂಡು ಹೋಗುವಂತೆ ಮಾಡಲು 9 ಜನರ ಕೈವಾಡವಿದೆ ಎನ್ನುವ ಮಾಹಿತಿ ಸಿಕ್ಕಿದೆ, ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

ವಿಶ್ವ ಹಿಂದು ಪರಿಷತ್, ಭಜರಂಗ ದಳ ಸೇರಿ ಹಿಂದು ಸಂಘಟನೆಗಳು ಫೆ.3 ರಂದು ತಾಲೂಕು ಬಂದ್​ಗೆ ಕರೆ ನೀಡಿವೆ. ಸಾರ್ವಜನಿಕರು ಬಂದ್​ಗೆ ಸಹಕಾರ ನೀಡಬೇಕು. ಘಟನೆಗೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಫೆ.6 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದರು.

ನೊಂದ ಮಹಿಳೆಯರ ಜತೆ ಎಂದಿಗೂ ಹಿಂದು ಸಂಘಟಕರು ಇರುತ್ತಾರೆ. ಹೆದರುವ ಅವಶ್ಯಕತೆ ಇಲ್ಲ. ಜೈನ್ ಮುನಿಯವರೊಂದಿಗೆ ಮಾತನಾಡಿ ನೊಂದ ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗ ನೀಡಲಾಗುತ್ತಿದೆ ಮತ್ತು ತ್ರಿಶೂಲ್ ದೀಕ್ಷಾ ನೀಡಿ ಧೈರ್ಯ ತುಂಬಲಾಗುತ್ತದೆ ಎಂದರು.