ಜಿಲ್ಲೆ

ಕನಗನಮರಡಿ ಗ್ರಾಪಂಗೆ ಪ್ರಮೀಳಾ ಹೇಮಣ್ಣ ಅಧ್ಯಕ್ಷೆ

ಪಾಂಡವಪುರ: ತಾಲೂಕಿನ ಕನಗನಮರಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ರೈತಸಂಘ, ಕಾಂಗ್ರೆಸ್ ಮೈತ್ರಿಕೂಟದ ಬೆಂಬಲಿತ ಅಭ್ಯರ್ಥಿ ಪ್ರಮೀಳಾ ಹೇಮಣ್ಣ ವಿರೋಧ ಆಯ್ಕೆಯಾದರು.


ಭಾಗ್ಯಮ್ಮ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಪ್ರಮೀಳಾ ಹೊರತುಪಡಿಸಿ ಬೇರ‌್ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯೂ ಆದ ತಾಪಂನ ನರೇಗಾ ಸಹಾಯಕ ನಿರ್ದೇಶಕ ಸುರೇಂದ್ರ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷರನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿನಂದಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಕನಗನಮರಡಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಸದಸ್ಯರ ಜತೆಗೂಡಿಸಿ ಅಧ್ಯಕ್ಷರು ಕೆಲಸ ಮಾಡಲಿದ್ದಾರೆ. ಸರ್ಕಾರದ ಯೋಜನೆ, ಸವಲತ್ತುಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಕೆಲಸವನ್ನು ನಾವೆಲ್ಲರೂ ಜತೆಗೂಡಿ ಮಾಡುತ್ತೇವೆ ಎಂದು ಭರವಸೆ ನೀಡಿದರು.


ಕೆನ್ನಾಳು ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಆರಂಭದಲ್ಲಿ ಅರ್ಥಮಾಡಿಕೊಂಡು ಕೆಲಸ ಮಾಡಲು ಸ್ವಲ್ಪ ಕಷ್ಟವಾಗಿತ್ತು. ಇದೀಗ ಹಂತಹಂತವಾಗಿ ಬದಲಾವಣೆ ಮಾಡಿಕೊಂಡು ಸುಲಲಿತವಾಗಿ ಕೆಲಸ ಮಾಡುತ್ತಿದ್ದೇವೆ. ಕಂದಾಯ, ಆರ್‌ಟಿಸಿ ತಿದ್ದುಪಡಿ, ಆದಾಯ, ಜಾತಿ ಪ್ರಮಾಣ ಪತ್ರಗಳು, ಪೌತಿಖಾತೆಗಳು ಸೇರಿದಂತೆ ಅನೇಕ ಕೆಲಸಕಾರ್ಯಗಳು ಆಗಿವೆ. ಕೆನ್ನಾಳು ಗ್ರಾಮದಲ್ಲಿ ಸ್ವಾತಂತ್ರಾೃ ನಂತರ ಇದೇ ಮೊದಲ ಬಾರಿಗೆ ಗ್ರಾಮಠಾಣಾ ವಿಸ್ತರಣೆ ಮಾಡುವ ಕೆಲಸ ಆರಂಭವಾಗಿದೆ. ಈ ಮೂಲಕ ಗ್ರಾಮದ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ವಿದ್ಯುತ್ ಇಲಾಖೆಯಿಂದ 35 ಕಂಬ ಬದಲಾವಣೆ ಮಾಡಿದ್ದಾರೆ. ಸುಮಾರು 3 ಕಿ.ಮೀ. ವಿದ್ಯುತ್ ತಂತಿ ಬದಲಾವಣೆ ಹಾಗೂ 6 ಹೊಸ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲಾಗಿದೆ ಎಂದರು.


ಗ್ರಾಪಂ ಉಪಾಧ್ಯಕ್ಷ ರಂಗಸ್ವಾಮಿ, ಸದಸ್ಯರಾದ ಸಿ.ಬಿ.ತಮ್ಮಣ್ಣ, ಎಂ.ಕೆ.ಸ್ವಾಮಿಗೌಡ, ಸುದರ್ಶನ್, ಈರಾಚಾರಿ, ಅಭಿ, ವಸಂತ, ಜಯಲಕ್ಷ್ಮೀ, ಪಿಡಿಒ ಪುರುಷೋತ್ತಮ್, ಕಾರ್ಯದರ್ಶಿ ಜಯರಾಮು, ಮುಖಂಡರಾದ ಧರ್ಮರತ್ನಾಕರ, ಸೋಮಣ್ಣ, ಕೆ.ಜೆ.ಚನ್ನೇಗೌಡ, ಹೇಮಣ್ಣ, ಸಿ.ಸ್ವಾಮೀಗೌಡ ಇತರರಿದ್ದರು.