ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ  
ಜಿಲ್ಲೆ

ಸಿದ್ದರಾಮಯ್ಯರನ್ನು ಹೈಕಮಾಂಡ್ ಅವಮಾನಿಸಿದೆ ಪ್ರಲ್ಹಾದ್ ಜೋಶಿ ಹೇಳಿಕೆ

ಮಂಗಳೂರು: ಕರ್ನಾಟಕದ ಜನಪ್ರಿಯ ನಾಯಕ ಸಿದ್ದರಾಮಯ್ಯ ಅವರನ್ನು ರಾಹುಲ್ ಗಾಂಧಿ ನಡೆಸಿಕೊಂಡ ರೀತಿ ಸರಿಯಿಲ್ಲ. ರಾಜೀವ್ ಗಾಂಧಿ ಅವರು ವೀರೇಂದ್ರ ಪಾಟೀಲ್ ಅವರನ್ನು ಅವಮಾನ ಮಾಡಿದ ರೀತಿಯಲ್ಲೇ ಮಗ ರಾಹುಲ್ ಗಾಂಧಿ ಸಿದ್ದರಾಮಯ್ಯರನ್ನು ನಡೆಸಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಮಂಗಳೂರಿಗೆ ಗುರುವಾರ ಆಗಮಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿ, ಸಿದ್ದರಾಮಯ್ಯ ಮತ್ತು ಬಿ.ಎಸ್.ಯಡಿಯೂರಪ್ಪ ರಾಜ್ಯದ ಮಾಸ್ ಲೀಡರ್ಸ್. ದೇಶದಲ್ಲಿ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಮೂರು ಕಡೆ ಮೇಲ್ಜಾತಿಯವರು ಮುಖ್ಯಮಂತ್ರಿ ಇದ್ದಾರೆ. ಇಲ್ಲಿದ್ದ ಒಬ್ಬ ಹಿಂದುಳಿದ ವರ್ಗದ ಮುಖ್ಯಮಂತ್ರಿಗೆ ತೊಂದರೆ ಕೊಟ್ಟಿದ್ದಾರೆ. ಹಾಗೆಂದು ಸಿದ್ದರಾಮಯ್ಯ ಭಾರೀ ಪ್ರಾಮಾಣಿಕ ಎಂದಲ್ಲ. ಅವರನ್ನು ರಾಹುಲ್ ಗಾಂಧಿ ನಡೆಸಿಕೊಂಡ ಕ್ರಮ ತಕ್ಕುದಲ್ಲ ಎಂದವರು ಅಭಿಪ್ರಾಯ ಪಟ್ಟರು.
ಮತ್ತೆ ಬಿಜೆಪಿ ಆಡಳಿತ : ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಆಡಳಿತವಿಲ್ಲ. ಇಲ್ಲಿರೋದು ಕೇವಲ ತುಷ್ಠೀಕರಣ ಹಾಗೂ ಭ್ರಷ್ಟಾಚಾರ. ಡಿ.ಕೆ.ಶಿವಕುಮಾರ್ ಸಿಎಂ ಆದರೂ ಅದು ಮುಂದುವರಿಯುತ್ತದೆ. ಕಾಂಗ್ರೆಸ್ ವಿಫಲತೆಯಿಂದ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದಿಲ್ಲ. ಮೋದಿ ಅವರ ಮಾರ್ಗದರ್ಶನದಲ್ಲಿ, ಸಕಾರಾತ್ಮಕ ಚಿಂತನೆಗಳ ಮೂಲಕ ಅಧಿಕಾರಕ್ಕೆ ಬರುತ್ತೇವೆ. ಯಾವ ರೀತಿ ಪಶ್ಚಿಮ ಬಂಗಾಳ, ಅಸ್ಸಾಂ, ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೇ ಬಂದಿದ್ದೇವೋ ಅದೇ ರೀತಿ ಕರ್ನಾಟಕದಲ್ಲೂ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಬೆಲೆ ಏರಿಕೆ ಜಾಗತಿಕ ಬಿಕ್ಕಟ್ಟು: ನನ್ನ ಅನುಭವದಲ್ಲಿ ಈ ಪ್ರಮಾಣದ ಜಾಗತಿಕ ಬಿಕ್ಕಟ್ಟು ಹಿಂದೆಂದೂ ನಿರ್ಮಾಣವಾಗಿಲ್ಲ. ಇದರಿಂದಾಗಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗಿದೆ. ಕಾಂಗ್ರೆಸ್ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎಂದರು.
ಮುಸ್ಲಿಂ ಲೀಗ್ ಜತೆ ಕಾಂಗ್ರೆಸ್ ಸಂಬಂಧ: ಭಟ್ಕಳದಲ್ಲಿ ದೇವರ ಕಟ್ಟೆ ಧ್ವಂಸ ಮಾಡಿದ ವಿಚಾರ ತುಷ್ಠೀಕರಣದ ಪರಾಕಾಷ್ಠೆ. ದೇಶ ವಿಭಜನೆ ವೇಳೆ ಮುಸ್ಲಿಂ ಲೀಗ್ ವರ್ತಿಸಿದ ರೀತಿ ಕಾಂಗ್ರೆಸ್ ವರ್ತಿಸುತ್ತಿದೆ. ಮುಸ್ಲಿಂ ಲೀಗ್ ಭಾಷೆಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ. ದೇಶವನ್ನು ಇಬ್ಬಾಗ ಮಾಡಲು ಕರೆ ಕೊಟ್ಟ ಪಾರ್ಟಿ ಮುಸ್ಲಿಂ ಲೀಗ್. ಅಂತಹ ಲೀಗ್ ಜತೆ ಕಾಂಗ್ರೆಸ್‌ಸಂಬಂಧ ಹೊಂದಿದೆ ಎಂದು ಪ್ರಲ್ಹಾದ್ ಜೋಶಿ ಆರೋಪಿಸಿದರು.