ಬಸವನಬಾಗೇವಾಡಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಿರಿಯ ಪತ್ರಕರ್ತ ಪ್ರಕಾಶ ಮಸಬಿನಾಳ ಅವರಿಗೆ ಶುಕ್ರವಾರ ಸಂಜೆ ಭಾವಪೂರ್ಣ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಬೆಣ್ಣೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಕಾಶ ಅವರು ಯುವ ಪತ್ರಕರ್ತರಿಗೆ ಸದಾ ಮಾರ್ಗದರ್ಶನ ನೀಡುತ್ತಿದ್ದರು. ಪತ್ರಕರ್ತರು ಸಮಾಜದ ಸ್ವಾಸ್ಥೃ ಹಾಳು ಮಾಡುವಂತ ಸುದ್ದಿಗಳನ್ನು ಬರೆಯಬಾರದು ಎಂದು ತಿಳಿಸುತ್ತಿದ್ದರು. ಅವರ ಅಗಲಿಕೆಯಿಂದ ಪತ್ರಿಕಾ ರಂಗಕ್ಕೆ ನಷ್ಟವಾಗಿದೆ ಎಂದು ಸ್ಮರಿಸಿದರು.
ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ, ಕ.ಕಾ.ನಿ ಪತ್ರಕರ್ತರ ಸಂಘದ ತಾಲೂಕು ಮಾಜಿ ಅಧ್ಯಕ್ಷ ರಾಜು ಗಣಾಚಾರಿ, ಅಧ್ಯಕ್ಷ ಅಜೀಜ್ ಬಳಬಟ್ಟಿ, ಬಸವರಾಜ ನಂದಿಹಾಳ, ಮಂಜುನಾಥ ಕಲಾಲ ಮಾತನಾಡಿ, ಪ್ರಕಾಶ ಮಸಬಿನಾಳ ಅವರು ಸರ್ಕಾರಿ ಶಾಲೆಯಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುವ ಜತೆಗೆ 13 ವರ್ಷಗಳಿಂದ ಪಟ್ಟಣದಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಎಬಿವಿಪಿ ಮತ್ತು ಆರ್‌ಎಸ್‌ಎಸ್ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ಅತ್ಯಂತ ಸರಳ ವ್ಯಕ್ತಿತ್ವ ಹೊಂದಿದ್ದ ಅವರ ಅಗಲಿಕೆ ನೋವು ತಂದಿದೆ ಎಂದರು.
ಈ ವೇಳೆ ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ನಡೆಸಿದರು.
ಮಹಾಂತೇಶ ಸಂಗಮ, ನಾಗೇಶ ನಾಗೂರ, ಗುರುರಾಜ ಕನ್ನೂರ, ಶಕೀಲ್ ಗುಡ್ನಾಳ, ಮಹಿಬೂಬ್ ಕಂದಗಲ್ಲ, ಮಳೆಯಪ್ಪ ಹಾದಿಮನಿ, ಮಹಾಂತೇಶ ಹೂಗಾರ ಇತರರಿದ್ದರು.